ಮಾರಾಟ ಮಳಿಗೆ ಕಟ್ಟಡ ನಿರ್ಮಾಣ

14mdk08
ಬಸವನಹಳ್ಳಿಯ ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ಆವರಣದಲ್ಲಿ ನೂತನ ಮಾರಾಟ ಮಳಿಗೆ ಕಾಮಗಾರಿಗೆ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಭೂಮಿಪೂಜೆ ನೆರವೇರಿಸಿದರು. ಅರುಣ್ ರಾವ್, ವಿ.ಪಿ. ಶಶಿಧರ್, ಕಾವೇರಮ್ಮ, ಮಂಜುನಾಥ್ ಗುಂಡೂರಾವ್ ಮತ್ತಿತರರು ಇದ್ದರು.
Published on

ಕುಶಾಲನಗರ: ಗುಡ್ಡೆಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ಬಸವನಹಳ್ಳಿಯ ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ಆವರಣದಲ್ಲಿ 25 ಲಕ್ಷ ರೂ. ವೆಚ್ಚದ ನೂತನ ಮಾರಾಟ ಮಳಿಗೆಯ ಕಟ್ಟಡದ ಕಾಮಗಾರಿಗೆ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಮಂಗಳವಾರ ಭೂಮಿಪೂಜೆ ನೆರವೇರಿಸಿದರು.

ನಂತರ ಮಾತಾನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಗೆ ವಿವಿಧ ಯೋಜನೆಗಳ ಅಡಿಯಲ್ಲಿ ಹಲವು ಕಾಮಗಾರಿ ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಸಹಕಾರ ಇಲಾಖೆಯ ಸಹಕಾರದೊಂದಿಗೆ ಬಸವನಹಳ್ಳಿ ಸಹಕಾರ ಸಂಘದ ಆವರಣದಲ್ಲಿ ನೂತನ ಮಾರಾಟ ಮಳಿಗೆಗಳ ಕಟ್ಟಡದ ಕಾಮಗಾರಿಯ ನಂತರ ಸ್ಥಳೀಯ ಅರಣ್ಯ ಉತ್ಪನ್ನಗಳ ಮಾರಾಟಕ್ಕೆ ಹೆಚ್ಚು ಒತ್ತು ನೀಡುವುದರ ಮೂಲಕ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡುವುದು ಸೂಕ್ತ ಎಂದರು.

ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಎಸ್.ಆರ್.ಅರುಣ್‌ರಾವ್ ಮಾತನಾಡಿ, ಸಹಕಾರ ಸಂಘಗಳ ಬೆಳವಣಿಗೆಗೆ ಸದಸ್ಯರ ಸಹಕಾರ ಬಹು ಮುಖ್ಯ. ಗಿರಿಜನರ ಅಭಿವೃದ್ಧಿಗೆ ಪೂರಕವಾದ ವಿವಿಧ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಮಾರಾಟ ಕಟ್ಟಡದ ಜತೆಯಲ್ಲಿ ಪ್ರವಾಸೋದ್ಯಮಕ್ಕೆ ಅನುಕೂಲವಾಗುವ ರೀತಿಯಲ್ಲಿ ಸಂಘದ ಆವರಣದಲ್ಲಿ ಉತ್ತಮವಾದ ಜಾಗ ಇರುವುದರಿಂದ ಪ್ರವಾಸೋದ್ಯಮ ಇಲಾಖೆಯ ಸಹಕಾರದೊಂದಿಗೆ ಅತಿಥಿ ಗೃಹ ನಿರ್ಮಾಣದ ಚಿಂತನೆಯ ನಡೆಸಲಾಗಿದೆ ಎಂದು ಹೇಳಿದರು.

ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡೂರಾವ್, ಕುಶಾಲನಗರ ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಸಹಕಾರ ಸಂಘದ ಉಪಾಧ್ಯಕ್ಷೆ ಕಾವೇರಮ್ಮ, ನಿರ್ದೇಶಕರಾದ ಸಿ.ಕೆ. ಉದಯಕುಮಾರ್, ಬಿ.ಎ. ಗಂಗಾಧರ್, ಎಸ್.ಆರ್.ಕಮಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net