ಮಾರಾಟ ನಿಯಮ ಉಲ್ಲಂಘಿಸಿದರೆ ಕ್ರಮ

15 SIRAGUPPA 01
ಸಿರಗುಪ್ಪದಲ್ಲಿ ಆಯೋಜಿಸಿದ್ದ ರಸಗೊಬ್ಬರ, ಬಿತ್ತನೆಬೀಜ, ಕೀಟನಾಶಕ ಮಾರಾಟಗಾರರ ಸಭೆಯಲ್ಲಿ ಸಹಾಯಕ ನಿರ್ದೇಶಕ ಮಂಜುನಾಥರೆಡ್ಡಿ ಮಾತನಾಡಿದರು. ರಸಗೊಬ್ಬರ ಮಾರಾಟಗಾರರ ಸಂಘದ ತಾಲೂಕು ಅಧ್ಯಕ್ಷ ಮಾಧವಯ್ಯ, ಕೃಷಿ ಅಧಿಕಾರಿ ಬಾಲಾಜಿ ನಾಯ್ಕ ಇದ್ದರು.
Published on

ಸಿರಗುಪ್ಪ: ಸರ್ಕಾರ ನಿಗದಿಪಡಿಸಿದ ದರದಲ್ಲಿಯೇ ರಸಗೊಬ್ಬರ ಮಾರಾಟ ಮಾಡಬೇಕು. ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥರೆಡ್ಡಿ ಹೇಳಿದರು.

ಪಟ್ಟಣದ ಸಿ.ಡಿ.ಪಿ.ಒ. ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ತಾಲೂಕಿನ ರಸಗೊಬ್ಬರ, ಬಿತ್ತನೆಬೀಜ, ಕೀಟನಾಶಕ ಮಾರಾಟಗಾರರ ಸಭೆಯಲ್ಲಿ ಮಾತನಾಡಿದರು. ಯೂರಿಯಾ ಗೊಬ್ಬರ ಖರೀದಿಸಿದರೆ ಅದರ ಜೋತೆ ಬೇರೆ ತರಹದ ರಸಗೊಬ್ಬರ ಖರೀದಿಸಬೇಕೆಂದು ಅಂಗಡಿ ಮಾಲೀಕರು ರೈತರಿಗೆ ಹೇಳುವುದು ಅಪರಾಧವಾಗಿದೆ.

ಅಂಗಡಿಯಲ್ಲಿ ದರಪಟ್ಟಿ ಹಾಕಬೇಕು. ರಸೀದಿ ಕಡ್ಡಾಯವಾಗಿ ನೀಡಬೇಕು. ರಸಗೊಬ್ಬರ ಮಾರಾಟದ ನಿಯಮಗಳನ್ನು ಉಲ್ಲಂಘಿಸಿದರೆ ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಹತ್ತಿ ಬಿತ್ತನೆ, ಭತ್ತ ನಾಟಿ ಕಾರ್ಯ ಆರಂಭವಾಗಿದೆ. ರೈತರಿಗೆ ರಸಗೊಬ್ಬರ ಕೊರತೆಯಾಗದಂತೆ ವ್ಯಾಪಾರಿಗಳು ದಾಸ್ತಾನು ಮಾಡಿ ಮಾರಾಟ ಮಾಡಬೇಕು. ಸಣ್ಣ ಮತ್ತು ಅತಿಸಣ್ಣ ರೈತರಿಗೆ ಆದ್ಯತೆ ನೀಡಿ. ಈಗಾಗಲೇ 2900 ಟನ್ ಯೂರಿಯಾ ಬಂದಿದ್ದು, ಸಮರ್ಪಕವಾಗಿ ರೈತರಿಗೆ ವಿತರಣೆ ಮಾಡಬೇಕು ಎಂದರು.

ಯೂರಿಯಾ ಸಿಗುತ್ತಿಲ್ಲ ಎನ್ನುವ ಸುಳ್ಳು ಸುದ್ದಿಯನ್ನು ಹರಡಿಸಬಾರದು. ಕೃಷಿ ಇಲಾಖೆ ಸಿಬ್ಬಂದಿ ಅಂಗಡಿಗಳಿಗೆ ಭೇಟಿ ನೀಡಿದಾಗ ದಾಖಲೆಗಳನ್ನು ಕಡ್ಡಾಯವಾಗಿ ತೋರಿಸಬೇಕು. ಪಾಸ್ ಯಂತ್ರವನ್ನು ಇನ್ನೂ 79 ವ್ಯಾಪಾರಿಗಳು ಪಡೆದಿಲ್ಲ, ಪಾಸ್ ಯಂತ್ರದ ಮೂಲಕವೇ ವಹಿವಾಟು ನಡೆಯಬೇಕು.

ನಕಲಿ, ಕಳಪೆ, ಅವಧಿ ಮುಗಿದ ರಸಗೊಬ್ಬರ ಮಾರಾಟ ಮಾಡಿದರೆ ವ್ಯಾಪಾರಿ ಪರವಾನಗಿ ರದ್ದು ಮಾಡಲಾಗುವುದು. ಕೃಷಿ ಇಲಾಖೆ ಅಧಿಕಾರಿಗಳು ಕರೆದ ಸಭೆಗೆ ಗೈರಾದರೆ ನೋಟೀಸ್ ನೀಡುವಂತೆ ಸೂಚನೆ ನೀಡಿದರು. ಮುಖಂಡ ಕಂದಗಲ್ ಈರಣ್ಣ, ಕೃಷಿ ಅಧಿಕಾರಿಗಳಾದ ಬಾಲಾಜಿ ನಾಯ್ಕ, ಪುರುಷೋತ್ತಮ, ಪರಮೇಶ್ವರ ರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net