‘ನಂದಿನಿ’ ಹಾಲು ಸಂಗ್ರಹ, ಮಾರಾಟದಲ್ಲಿ ಹೆಚ್ಚಳ: ಲಾಭದತ್ತ ಮುಖ ಮಾಡಿರುವ ಕೆಎಂಎಫ್​​

kmf milk
Published on

ಬೆಂಗಳೂರು: ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್​​) ಕ್ಷೀರ ಸಂಗ್ರಹ ಹಾಗೂ ಮಾರಾಟದಲ್ಲಿ ಮತ್ತೆ ದಾಖಲೆ ಬರೆದಿದೆ. ಇತ್ತೀಚಿಗಷ್ಟೇ ದಿನವೊಂದರಲ್ಲಿ 1 ಕೋಟಿ ಲೀಟರ್‌ಗೂ ಅಧಿಕ ಪ್ರಮಾಣದ ಹಾಲು ಸಂಗ್ರಹಿಸಿದ್ದ ಕೆಎಂಎಫ್​, ಮುಂಗಾರು ಅವಧಿಯಲ್ಲಿ ಸುರಿದ ಉತ್ತಮ ಮಳೆಯಿಂದಾಗಿ ಹಾಲಿ ಜುಲೈ ತಿಂಗಳಿನಲ್ಲಿ ಪ್ರತಿನಿತ್ಯವೂ ಒಂದು ಕೋಟಿ ಲೀ. ಹಾಲು ಸಂಗ್ರಹಿಸಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಪ್ರಸ್ತುತ ಸಂಸ್ಥೆಯ ಹದಿನಾರು ಒಕ್ಕೂಟಗಳಲ್ಲಿ ನಿತ್ಯವೂ ಸರಾಸರಿ 98.26 ಲಕ್ಷ ಕೆಜಿ ಹಾಲು ಸಂಗ್ರಹವಾಗುತ್ತಿದೆ. ಈ ತಿಂಗಳಲ್ಲಿ ಪ್ರತಿದಿನವೂ 1 ಕೋಟಿ ಕೆಜಿ ಹಾಲು ಸಂಗ್ರಹವಾಗುತ್ತಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ 96.74 ಲಕ್ಷ ಕೆಜಿ ಹಾಲು ಸಂಗ್ರಹವಾಗಿತ್ತು. ಸಂಗ್ರಹಗೊಳ್ಳುವ ಹಾಲಿನಲ್ಲಿ ಅರ್ಧದಷ್ಟು ಮಾರಾಟವಾಗುತ್ತಿದ್ದು, ಕಳೆದ ವಾರದಲ್ಲಿ ನಿತ್ಯವೂ ಸರಾಸರಿ 46 ಲೀ. ಮಾರಾಟ ಕಂಡಿದೆ. ಉಳಿದ ಹಾಲು ಸಂಸ್ಥೆಯ ಇತರ ಉತ್ಪನ್ನಗಳಿಗೆ ಬಳಸಿಕೊಳ್ಳಲಾಗುತ್ತಿದೆ.

ಬೆಂಗಳೂರು ಒಕ್ಕೂಟ ಮುಂದು:

ಕೆಎಂಎಫ್​ 16 ಒಕ್ಕೂಟಗಳನ್ನು ಹೊಂದಿದ್ದು, ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳನ್ನು ಒಳಗೊಂಡಿರುವ ‘ಬಮುಲ್’ ಒಕ್ಕೂಟವು ಹೆಚ್ಚು ಹಾಲು ಸಂಗ್ರಹ ಹಾಗೂ ಮಾರಾಟದಲ್ಲಿ ಮೊದಲ ಸ್ಥಾನದಲ್ಲಿದೆ. ಬಮೂಲ್ ನಿತ್ಯವೂ ಸರಾಸರಿ 17.18 ಲಕ್ಷ ಕೆಜಿ ಹಾಲು ಸಂಗ್ರಹಿಸುತ್ತಿದ್ದು, 9.40 ಲಕ್ಷ ಲೀ. ಪ್ರಮಾಣದಷ್ಟು ಮಾರಾಟ ಮಾಡುತ್ತಿದೆ. ರಾಜಧಾನಿಯಲ್ಲಿ ಹಾಲು ಹಾಗೂ ಮೊಸರು ಮಾರಾಟ 22 ಲಕ್ಷ ಲೀ.ಗೂ ಅಧಿಕ ಮಾರಾಟವಾಗುತ್ತಿದೆ.

ಬೆಂಗಳೂರು ಹೊರತುಪಡಿಸಿ ಹಾಸನ, ಮಂಡ್ಯ, ತುಮಕೂರು, ಮೈಸೂರು ಹಾಗೂ ಶಿವಮೊಗ್ಗ ಒಕ್ಕೂಟಗಳಲ್ಲಿ ಹೆಚ್ಚಿನ ಹಾಲು ಸಂಗ್ರಹವಾಗುತ್ತಿದೆ. ಹಸುಗಳ ಸಂಖ್ಯೆ ಕಡಿಮೆ ಇರುವುದರಿಂದ ಕಲಬುರಗಿ ಒಕ್ಕೂಟದಲ್ಲಿ 0.60 ಲಕ್ಷ ಲೀಟರ್ ಕ್ಷೀರ ಸಂಗ್ರಹವಾಗುತ್ತಿದ್ದು, ಈ ಪೈಕಿ ಶೇ.95 ಮಾರಾಟವಾಗುತ್ತಿರುವುದು ಒಕ್ಕೂಟವನ್ನು ನಷ್ಟದಿಂದ ಪಾರು ಮಾಡಿದೆ.

ರಾಜ್ಯದ ವಿವಿಧ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಂದಿನಿ ಹಾಲು ಹಾಗೂ ಇತರ ಉತ್ಪನ್ನಗಳ ಮಾರಾಟ ಹೆಚ್ಚುತ್ತಿದೆ. ಕೆಲ ತಿಂಗಳ ಹಿಂದೆ ಪರಿಚಯಿಸಿರುವ ದೋಸೆ ಹಿಟ್ಟು ರಾಜಧಾನಿ ಬೆಂಗಳೂರಿನ ಗ್ರಾಹಕರ ಮನ ಗೆದ್ದಿದೆ. ಮುಂದಿನ ದಿನಗಳಲ್ಲಿ ಇತರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೂ ಮಾರಾಟಕ್ಕೆ ಸಿದ್ಧತೆ ನಡೆದಿದೆ ಎಂದು ಕೆಎಂಎಫ್​ ಅಧಿಕಾರಿಗಳು ತಿಳಿಸಿದ್ದಾರೆ.

ತುಪ್ಪಕ್ಕೂ ಇದೆ ಬೇಡಿಕೆ:

ನಂದಿನಿ ಹಾಲು/ಮೊಸರು ನಂತರ ಕೆಎಂಎಫ್​ ತುಪ್ಪ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ. ಇತರ ಸಂಸ್ಥೆಗಳಿಗಿಂತ ನಂದಿನಿ ಬ್ರ್ಯಾಂಡಿನ ತುಪ್ಪ ಅಧಿಕ ಸ್ವಾದ ಹಾಗೂ ಗುಣಮಟ್ಟವನ್ನು ಹೊಂದಿದೆ. ಇದೇ ಕಾರಣದಿಂದ ತಿರುಪತಿ ತಿಮ್ಮಪ್ಪನ ದೇವಸ್ಥಾನದ (ಟಿಟಿಡಿ) ಲಡ್ಡು ಪ್ರಸಾದಕ್ಕೆ ನಂದಿನಿ ತುಪ್ಪವನ್ನೇ ಬಳಸಲಾಗುತ್ತಿದೆ. ಇದರಿಂದಾಗಿ ಲಡ್ಡುವಿನ ಘಮ ಮತ್ತಷ್ಟು ಹೆಚ್ಚಿದೆ. ರಾಜ್ಯ ಹಾಗೂ ನೆರೆ ರಾಜ್ಯಗಳಲ್ಲಿನ ಸೂಪರ್ ಮಾರ್ಕೆಟ್‌ಗಳಲ್ಲಿ ನಂದಿನಿ ತುಪ್ಪಕ್ಕೆ ಭಾರಿ ಬೇಡಿಕೆ ಬಂದಿದೆ.

ಒಕ್ಕೂಟವಾರು ಹಾಲು ಸಂಗ್ರಹ, ಮಾರಾಟ ವಿವರ:

ಒಕ್ಕೂಟ ಸಂಗ್ರಹ* ಮಾರಾಟ**

ಬೆಂಗಳೂರು 17.18 9.40

ಹಾಸನ 14.00 3.24

ಮಂಡ್ಯ 11.90 4.15

ತುಮಕೂರು 9.52 4.89

ಮೈಸೂರು 9.15 3.31

ಶಿವಮೊಗ್ಗ 7.95 2.75

ಕೋಲಾರ 7.17 2.99

ಚಿಕ್ಕಬಳ್ಳಾಪುರ 4.85 2.26

ದಕ್ಷಿಣಕನ್ನಡ 3.94 3.88

ಚಾಮರಾಜನಗರ 2.87 0.64

ಬಳ್ಳಾರಿ 2.16 1.31

ಬೆಳಗಾವಿ 2.20 0.93

ಧಾರವಾಡ 1.83 1.20

ಹಾವೇರಿ 1.46 0.14

ವಿಜಯಪುರ 1.49 0.84

ಕಲಬುರಗಿ 0.60 0.60

ಮದರ್ ಡೇರಿ - 3.47

* ಲಕ್ಷ ಕೆಜಿಗಳಲ್ಲಿ

** ಲಕ್ಷ ಲೀ.ಗಳಲ್ಲಿ

1 ದಿನದಲ್ಲಿ ಅತಿ ಹೆಚ್ಚು ಹಾಲು ಸಂಗ್ರಹ:

1.06 ಕೋಟಿ ಕೆಜಿ ಪ್ರತಿದಿನ (ಜೂ.21, 2025)

1.00 ಕೋಟಿ ಕೆಜಿ ಪ್ರತಿದಿನ (ಜೂ.28, 2024)

1 ದಿನದಲ್ಲಿ ಅತಿ ಹೆಚ್ಚು ಹಾಲು ಮಾರಾಟ:

54.76 ಲಕ್ಷ ಲೀ. ಪ್ರತಿದಿನ (ಮಾ.30, 2025)

52.93 ಲಕ್ಷ ಲೀ. ಪ್ರತಿದಿನ (ಏ.11, 2024)

ಜುಲೈನಲ್ಲಿ ಸರಾಸರಿ ಹಾಲು ಸಂಗ್ರಹ:

1.04 ಕೋಟಿ ಕೆಜಿ ಪ್ರತಿದಿನ (2025)

96.74 ಲಕ್ಷ ಕೆಜಿ ಪ್ರತಿದಿನ (2024)

ಕೆಎಂಎಫ್​ ವಿವಿಧ ಒಕ್ಕೂಟಗಳಲ್ಲಿ ಹೆಚ್ಚು ಹಾಲು ಸಂಗ್ರಹವಾಗುತ್ತಿದ್ದು, ಮಾರಾಟದಲ್ಲೂ ಏರಿಕೆ ಕಂಡುಬಂದಿದೆ. ನಂದಿನಿ ಬ್ರ್ಯಾಂಡ್ ಅಡಿಯಲ್ಲಿ ಹಾಲು, ಮೊಸರು, ತುಪ್ಪ, ಐಸ್‌ಕ್ರೀಂ, ಸಿಹಿ ತಿಂಡಿ ಹಾಗೂ ಇತರ ಪದಾರ್ಥಗಳು ಗ್ರಾಹಕರಿಗೆ ಹೆಚ್ಚು ಇಷ್ಟವಾಗುತ್ತಿದ್ದು, ಸಂಸ್ಥೆಯ ಉತ್ಪನ್ನಗಳು ಬೇಡಿಕೆಯನ್ನು ಹೆಚ್ಚಿಸಿಕೊಳ್ಳುತ್ತಿವೆ. ರೈತರು ಮತ್ತು ಗ್ರಾಹಕರ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ.

- ಬಿ.ಶಿವಸ್ವಾಮಿ, ಕೆಎಂಎಫ್​ ಎಂಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net