

ಕಡಬ: ಕಡಬ ವಿಹಿಂಪ ಧರ್ಮ ಪ್ರಸಾರ ವಿಭಾಗ ಪುತ್ತೂರು ಜಿಲ್ಲೆ ಕಡಬ ಪ್ರಖಂಡ ಎಡಮಂಗಲ ಘಟಕ ವತಿಯಿಂದ ಎಡಮಂಗಲದ ಮರ್ದೂರಡ್ಕ ಸೇವಾ ಬಸ್ತಿಯಲ್ಲಿ ಸಂತರ ಪಾದಯಾತ್ರೆ ಕಾರ್ಯಕ್ರಮ ಭಾನುವಾರ ನಡೆಯಿತು.
ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಉಪೇಕ್ಷಿತ ಬಂಧುಗಳ ಮನೆಗೆ ಭೇಟಿ ನೀಡಿದರು. ಗೋಪೂಜೆ ನೆರವೇರಿಸಿ ಆಶೀರ್ವಚನ ನೀಡಿದ ಸ್ವಾಮೀಜಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ನೂರರ ವರ್ಷಾಚರಣೆಯಲ್ಲಿದ್ದು, ನೂರು ವರ್ಷಗಳಿಂದ ವಿವಿಧ ಸೇವಾ ಕಾರ್ಯಗಳನ್ನು ನಡೆಸಿ ಅಗಾಧ ಶಕ್ತಿಯಾಗಿ ಬೆಳೆದಿದೆ. ಆದರೂ ಇಂದಿಗೂ ಸಮಾಜದಲ್ಲಿ ಜಾತಿ ವ್ಯವಸ್ಥೆಗಳು ಹಾಗೂ ಉಪೇಕ್ಷಿತ ವರ್ಗಗಳನ್ನು ಪ್ರತ್ಯೇಕಿಸುವ ಕೆಲವರ ದೃಷ್ಟಿಕೋನದಿಂದ ಸಮಸ್ತ ಹಿಂದು ಸಮಾಜ ಒಗ್ಗಟ್ಟಿನಿಂದ ಇರಲು ತೊಡಕಾಗಿದೆ. ಆದ್ದರಿಂದ ಸಮಸ್ತ ಹಿಂದು ಸಮಾಜದ ಎಲ್ಲ ವರ್ಗಗಳ ಜನರನ್ನು ಒಂದುಗೂಡಿಸುತ್ತಾ ಅವರ ಕಷ್ಟ- ಸುಖದಲ್ಲಿ ನಾವು ಪಾಲ್ಗೋಳ್ಳಬೇಕು ಎಂದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ವೆಂಕಟ್ರಮಣ ರಾವ್ ಮಂಕುಡೆ ಮಾತನಾಡಿದರು. ಕಾಲನಿಯ ಹಿರಿಯರಾದ ಕತ್ತೋಡಿ ಮರ್ದೂರಡ್ಕ, ಹಿಂದು ಜಾಗರಣಾ ವೇದಿಕೆ ಜಿಲ್ಲಾ ಸಂಯೋಜಕ ಮೋಹನ್ ದಾಸ್ ಬಳ್ಕಾಡಿ, ವಿ.ಹಿಂ.ಪ. ಜಿಲ್ಲಾ ಸಹ ಕಾರ್ಯದರ್ಶಿ ಪ್ರಮೋದ್ ನಂದುಗುರಿ, ಪ್ರಖಂಡ ಸಹ ಕಾರ್ಯದರ್ಶಿ ಲಕ್ಷ್ಮೀಶ ಇಜಿನಡ್ಕ, ಸೇವಾ ಪ್ರಮುಖ್ ಚೇತನ್ ಎಡಮಂಗಲ, ಸತ್ಸಂಗ ಪ್ರಮುಖ್ ಸುಖೇಶ್ ಹಳೆಸ್ಟೇಷನ್, ಪ್ರಚಾರ ಪ್ರಸಾರ ಪ್ರಮುಖ್ ಚೇತನ್ ಕೋಡಿಂಬಾಳ, ಎಡಮಂಗಲ ಗ್ರಾಪಂ ಅಧ್ಯಕ್ಷ ರಾಮಣ್ಣ ಜಾಲ್ತಾರು, ಪ್ರಮುಖರಾದ ದಾಮೋದರ ಗೌಡ ಲೆಕ್ಕೆಸಿರಿಮಜಲು, ಸರ್ವೇಶ್ ಅಲಕ್ಕೆ, ಪ್ರವೀಣ್ ರೈ ಮರ್ದೂರಡ್ಕ, ಮುದರ ಮೇಲಿನ ಮರ್ದೂರಡ್ಕ, ಅಣ್ಣು ಕೆಳಗಿನ ಮರ್ದೂರಡ್ಕ, ಕುಂಞಪ್ಪ ಮರ್ದೂರಡ್ಕ ಮೊದಲಾದವರು ಉಪಸ್ಥಿತರಿದ್ದರು. ಕಡಬ ಪ್ರಖಂಡ ಕಾರ್ಯದರ್ಶಿ ಪ್ರಮೀಳಾ ವಂದಿಸಿದರು.