ಯುವತಿಯ ಅಶ್ಲೀಲ ಫೋಟೋ ಪ್ರಸಾರ ಯುವಕನ ಬಂಧನ, ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲು

mng--21 Oct NikilRaj
Published on

ಮಂಗಳೂರು: ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿದ್ದ ಕಾರ್ಕಳ ನಿಟ್ಟೆ ಗ್ರಾಮದ ಅಭಿಷೇಕ್ ಆಚಾರ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿಗೆ ಸೇರಿದ ಯುವತಿಯೊಬ್ಬಳ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಜಾತಿ ನಿಂದನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಯುವಕನನ್ನು ಕದ್ರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಾವೂರು ಆಕಾಶಭವನ ಕಾಪಿಗುಡ್ಡ ನಿವಾಸಿ ನಿಖಿಲ್ ರಾಜ್ (27) ಬಂಧಿತ ಆರೋಪಿ. ಕದ್ರಿ ಠಾಣೆಯಲ್ಲಿ ಯುವತಿ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿತ್ತು. ಮಂಗಳೂರು ಕೇಂದ್ರ ಉಪ ವಿಭಾಗದ ಎಸಿಪಿ ಪ್ರತಾಪ್ ಸಿಂಗ್ ಥೋರಟ್ ಅವರು ಆರೋಪಿಯನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ. ಆತನು ಉಪಯೋಗಿಸುತ್ತಿದ್ದ ಮೊಬೈಲ್ ಫೋನ್ ನ್ನು ಮುಂದಿನ ತನಿಖೆಗೆ ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

* ಪ್ರಕರಣದ ಹಿನ್ನೆಲೆ

ಕಾರ್ಕಳ ನಿಟ್ಟೆ ಗ್ರಾಮದ ಅಭಿಷೇಕ್ ಆಚಾರ್ಯ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಯುವತಿಯ ಅಶ್ಲೀಲ ವೀಡಿಯೊ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದ. ಮಾತ್ರವಲ್ಲದೆ ದೂರುದಾರ ಯುವತಿಗೆ ತಾನು ನೇಣು ಹಾಕಿರುವ ಫೋಟೋಗಳನ್ನು ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಮುಂದುವರಿದು ಅಭಿಷೇಕ್ ಆಚಾರ್ಯನ ತಮ್ಮ ಅಭಿಜಿತ್ ಆಚಾರ್ಯ ಹಾಗೂ ಇತರರು ಅಭಿಷೇಕ್ ಆಚಾರ್ಯ ಬರೆದಿದ್ದ ಡೆತ್ ನೋಟ್ ಹಾಗೂ ಯುವತಿಯ ಅಶ್ಲೀಲ ಫೋಟೊಗಳನ್ನು ಸಾಮಾಜಿಕ ದೃಶ್ಯ ಮಾಧ್ಯಮ, ಯೂಟ್ಯೂಬ್, ಫೇಸ್ ಬುಕ್, ಇನ್ ಸ್ಟಾಗ್ರಾಮ್, ವಾಟ್ಸ್ ಆ್ಯಪ್ ಗ್ರೂಪ್ ಗಳಲ್ಲಿ ವೈರಲ್ ಮಾಡಿ ತೇಜೋವಧೆ ಮಾಡಿ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ. ಯುವತಿ ಪರಿಶಿಷ್ಟ ಜಾತಿಗೆ ಸೇರಿರುವ ಹಿನ್ನೆಲೆಯಲ್ಲಿ ಪೊಲೀಸರು ಐಟಿ ಕಾಯ್ದೆ ಮತ್ತು ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು.

ಸಾಮಾಜಿಕ ಜಾಲತಾಣದಲ್ಲಿ ರವಾನಿಸಲಾಗಿದ್ದ ಸಂದೇಶಕ್ಕೆ ಪೂರಕವಾಗಿ ಜಾತಿ ನಿಂದನೆಯ ಶಬ್ದವನ್ನು ಬಳಸಿದ ಪೂರಕ ಸಾಕ್ಷ್ಯಗಳು ಲಭ್ಯವಾದ ಹಿನ್ನೆಲೆಯಲ್ಲಿ ನಿಖಿಲ್ ರಾಜ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಕೆಲವರು ಯುವತಿಯ ಅಶ್ಲೀಲ ಫೋಟೊ ಮತ್ತು ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುತ್ತಿದ್ದು, ಅವರ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ. ಈ ರೀತಿಯ ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲರನ್ನು ಬಂಧಿಸಲಾಗುವುದು.

- ಸುಧೀರ್ ಕುಮಾರ್ ರೆಡ್ಡಿ

ಮಂಗಳೂರು ನಗರ ಪೊಲೀಸ್ ಆಯುಕ್ತರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net