ಸಂತ ಸೇವಾಲಾಲ್‌ರ ಸಂದೇಶ ಇಂದಿಗೂ ಪ್ರಸ್ತುತ

15KGLPHOTO-2,,
Published on

ಕೊಳ್ಳೇಗಾಲ: ಸನ್ಮಾರ್ಗದ ದಾರಿ ತೋರಿಸಿದ ಸಂತರುಗಳಲ್ಲಿ ಸಂತ ಸೇವಾಲಾಲ್ ಪ್ರಮುಖರು ಎಂದು ಸಾಹಿತಿ ಪಳನಿ ಸ್ವಾಮಿ ಜಾಗೇರಿ ಹೇಳಿದರು.


ತಾಲೂಕಿನ ಸೂರಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಎನ್‌ಎನ್‌ಎಸ್ ಘಟಕ ವತಿಯಿಂದ ಆಯೋಜಿಸಿದ್ದ ಸಂತ ಸೇವಾಲಾಲ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂತ ಸೇವಾಲಾಲ್‌ರ ಭವಿಷ್ಯವಾಣಿ, ಸಮಾಜಸೇವೆ, ವೈದ್ಯಕೀಯ ಚಿಕಿತ್ಸಾ ಪದ್ಧತಿ, ವ್ಯಾಪಾರ ನೀತಿ, ಯುದ್ಧ ನೀತಿ ಇವೆಲ್ಲವೂ ಪ್ರಸ್ತುತ ಅವಶ್ಯಕವಾಗಿದೆ. ಎಲೆ ಮರೆಕಾಯಿಯಂತಿದ್ದ ಸಮಾಜದ ಸಂತರನ್ನು ಸಂವಿಧಾನದ ಆಶಯದಂತೆ ಗುರುತಿಸಿ ಅವರ ಜಯಂತಿಯನ್ನು ಸರ್ಕಾರ ಶಾಲೆ-ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ಆಚರಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಿ ಅವರ ವಿಚಾರವನ್ನು ಅನಾವರಣ ಗೊಳಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯವಾಗಿದೆ ಎಂದರು.


ಹಿಂದೆಯೇ, ಸೇವಾಲಾಲ್ ಅವರು ಹಸುವಿನ ಗಂಜಲ, ಸಗಣಿ, ಕುಡಿಯುವ ನೀರು ಮಾರಾಟವಾಗುತ್ತದೆ ಎಂದಿದ್ದರು. ಅದರಂತೆ ಈಗ ನಡೆಯುತ್ತಿದೆ. ದೇವರನ್ನು ಗುಡಿಯಲ್ಲಿ ಬಂಧಿಸಿಡುವುದಕ್ಕಿಂತ ಹೃದಯದಲ್ಲಿ ಬಂಧಿಸಿಡಬೇಕು. ಭಗವಂತನನ್ನು ಜತೆಯಲ್ಲಿಯೇ ಇರಿಸಿಕೊಳ್ಳಿ ಎಂದಿದ್ದರು. ಅವರ ಮಾತು ಬಸವಣ್ಣನ ದೇಹವೇ ದೇಗುಲ ಎಂಬ ಮಾತಿಗೆ ಇಂಬು ನೀಡುವಂತಿದೆ. ಪ್ರಾಣಿ, ಪಕ್ಷಿ, ಗಿಡ-ಮರಗಳನ್ನು ತಮ್ಮ ಮಕ್ಕಳಂತೆ ಪೋಷಿಸಿ ಎಂದ ಈ ಮಹಾನ್ ಗುರುವಿಗೆ ನಮನ ಸಲ್ಲಿಸಿ. ಅವರ ಮಾರ್ಗದಲ್ಲಿ ನಡೆದರೆ ನಮಗೆ ಭಾಗ್ಯವೆ ಸಿಗುತ್ತದೆ ಎಂದರು.


ಮುಖ್ಯಶಿಕ್ಷಕ ಎನ್. ಲೋಕೇಶ್, ಶಿಕ್ಷಕಿ ಆರ್.ಮೇರಿ ನಿರ್ಮಲಾ, ಸಿಆರ್‌ಪಿ ನಟರಾಜು, ಗೋವಿಂದರಾಜ್, ದೇವಿಕಾ, ಪಿ.ಲಿಂಗ ರಾಜು ಮಲ್ಲೇಶ್ ಬಾಬು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net