ಯುದ್ಧಕ್ಕೂ ಸೈ, ಕೃಷಿಗೂ ಸೈ!

ಯುದ್ಧಕ್ಕೂ ಸೈ, ಕೃಷಿಗೂ ಸೈ!
Published on

ಶೇಖರ್ ಸಂಕೋಡನಹಳ್ಳಿ ಅರಸೀಕೆರೆ: ಯುದ್ಧ್ದ ಭೂಮಿಯಲ್ಲಿ ಜೈ ಜವಾನ್ ಘೋಷಣೆ ಕೂಗಿದ್ದ ಯೋಧ ನಿವೃತ್ತಿ ಬಳಿಕ ಜೈ ಕಿಸಾನ್ ಘೋಷ ವಾಕ್ಯವನ್ನು ಮೊಳಗಿಸಿರುವುದು ಸೇನೆ ಹಾಗೂ ಕೃಷಿ ಮಹತ್ವವನ್ನು ಅನಾವರಣಗೊಳಿಸಿದೆ.

ಭಾರತೀಯ ಸೇನೆಯಲ್ಲಿ ಹದಿನೇಳು ವರ್ಷ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಬಳಿಕ ಕೃಷಿ ಕಾಯಕದಲ್ಲಿ ತೊಡಗಿರುವ ತಾಲೂಕಿನ ಕೆಳಗಿನ ಹಬ್ಬನಘಟ್ಟ ಗ್ರಾಮದ ಮಾಜಿ ಯೋಧ ನವೀನ್ ಕುಮಾರ್ ಯಶೋಗಾಥೆ ಯುವ ರೈತರಿಗೆ ಸ್ಫೂರ್ತಿಯಾಗಿದೆ. ಆಧುನಿಕ ತಂತ್ರಜ್ಞಾನದ ಜತೆಗೆ ಸುಧಾರಿತ ತಂತ್ರಜ್ಞಾನ ಬಳಸಿ ಬಾಳೆ ಬೆಳೆಯುವ ಮೂಲಕ ಮಾದರಿಯಾಗಿ ಹೊರಹೊಮ್ಮಿದ್ದಾರೆ. ಪದವಿ ನಂತರ ಮುಂದೇನು, ಸರ್ಕಾರಿ ಉದ್ಯೋಗ ದೊರೆಯಲಿಲ್ಲ ಎನ್ನುವ ಭಾವನೆ ಬದಿಗೊತ್ತಿ ಯುವ ಸಮುದಾಯ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಲ್ಲಿ ನಿರೀಕ್ಷೆಗೂ ಮೀರಿದ ಲಾಭ ಪಡೆಯಲು ಸಾಧ್ಯವಿದೆ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಎಂಟು ಎಕರೆ ಜಮೀನಿನಲ್ಲಿ ಆರೂವರೆ ಸಾವಿರ ಬಾಳೆ ಸಸಿ ನಾಟಿ ಮಾಡಿದ್ದು ಸಾವಯವ ಗೊಬ್ಬರ ನೀಡಲಾಗಿದೆ. ಮಣ್ಣು ಫಲವತ್ತತೆ ಬಳಿಕ ಆಗಸ್ಟ್ ಮಾಸಾಂತ್ಯದಲ್ಲಿ ಸಾಲಿಗೆ ಅನುಗುಣವಾಗಿ ನೆಲಮಂಗಲ ಬಳಿ ಇರುವ ನರ್ಸರಿಯಿಂದ ತಂದಿರುವ ಜಿ-11 ತಳಿಯ ಪುಟ್ಟಬಾಳೆ ಸಸಿಗಳನ್ನು 66 ಅಡಿ ಅಳತೆಗೆ ಅನುಗುಣವಾಗಿ ಹಾಕಲಾಗಿದೆ. ಜತೆಗೆ ಬೆಳೆ ಉಳಿಸಿಕೊಳ್ಳಲು ನಂಜನಗೂಡು ಸುತ್ತಮುತ್ತ ಅನುಸರಿಸಲಾಗುತ್ತಿರುವ ತಂತ್ರಗಾರಿಕೆಗೆ ಒತ್ತು ನೀಡಿರುವುದು ವಿಶೇಷ.

ಬಾಳೆ ಗಿಡಗಳನ್ನು ಭಾರಿ ಗಾಳಿ, ಮಳೆಯಿಂದ ರಕ್ಷಿಸಲು ಮರದ ಗುಜ್ಜುಗಳನ್ನು ಬಳಸುವ ಬದಲು ಟೇಪ್, ತಂತಿ, ದಾರ ಹಾಕಿದ್ದು ನಷ್ಟದ ಸಾಧ್ಯತೆಯನ್ನು ಕಡಿಮೆಗೊಳಿಸಿದಂತಾಗಿದೆ.

ಗೌರಿ, ಗಣೇಶ ಹಬ್ಬದ ವೇಳೆಗೆ ಫಸಲು ಕೈಸೇರುವ ನಿರೀಕ್ಷೆಯಿದ್ದು, ಹೂಡಿರುವ ಬಂಡವಾಳ ಲಾಭದ ಜತೆಗೆ ಹಿಂತಿರುಗಿ ಬರುವ ನಿರೀಕ್ಷೆ ಹೆಚ್ಚಿದೆ. ಸದ್ಯ ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಪುಟ್ಟಬಾಳೆ ಕಾಯಿಗೆ 50ರಿಂದ 60 ರೂ ಬೆಲೆಯಿದೆ. ಶ್ರಾವಣ ಮಾಸ, ವರಮಹಾಲಕ್ಷ್ಮೀ, ಗೌರಿ, ಗಣೇಶ ಹಬ್ಬದ ವೇಳೆಗೆ ಧಾರಣೆ ಇನ್ನಷ್ಟು ಹೆಚ್ಚಾಗಲಿದೆ. ಸ್ಥಳೀಯ ವರ್ತಕರಿಗೆ ಮಾಲು ನೀಡುವ ಜತೆಗೆ ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ರಾಜ್ಯಗಳಿಗೆ ಕಳುಹಿಸಿಕೊಡುವ ಗುರಿ ಇಟ್ಟುಕೊಂಡಿದ್ದಾರೆ.

ಬಾಳೆ ಕೃಷಿಗೆ ಅಧಿಕಾರಿಗಳು, ಪತ್ನಿ, ಕಟುಂಬ ಸದಸ್ಯರು, ಸ್ನೇಹಿತರು ನೀಡುತ್ತಿರುವ, ಪ್ರೋತ್ಸಾಹ ಸಹಕಾರ ಮರೆಯುವಂತಿಲ್ಲ ಎನ್ನುತ್ತಾರೆ ನವೀನ್‌ಕುಮಾರ್.

ಪಶು ಆಹಾರ ಮಾರಾಟ ಮಳಿಗೆ: ಸೇನೆಯಿಂದ ನಿವೃತ್ತಿಗೊಂಡ ಬಳಿಕ ಕೈಕಟ್ಟಿ ಕುಳಿತುಕೊಳ್ಳದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮಾಜಿ ಸೈನಿಕರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿದ್ದು, ಹಲವು ಹೋರಾಟಗಳಲ್ಲಿ ಭಾಗಿಯಾಗಿದ್ದಾರೆ. ಸರ್ಕಾರದಿಂದ ಭೂ ರಹಿತ ಮಾಜಿ ಸೈನಿಕರಿಗೆ ಭೂಮಿ ಕೊಡಿಸಲು ಮುಂಚೂಣಿಯಲ್ಲಿದ್ದು, ಪ್ರಕ್ರಿಯೆ ಚಾಲನೆಯಲ್ಲಿದೆ.

ಇದಲ್ಲದೆ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ದೇಶ ಸೇವೆಯ ಮಹತ್ವವನ್ನು ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ. ನೊಳಂಬ ಸ್ವಯಂ ಸೇವಕ ಸಂಘದ ಸಕ್ರಿಯ ಕಾರ್ಯಕರ್ತನಾಗಿಯೂ ಗುರುತಿಸಿಕೊಂಡಿದ್ದಾರೆ. ಸಂಘದ ವತಿಯಿಂದ ನಡೆಯುವ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಮತ್ತಿತರ ಚಟುವಟಿಕೆಗಳಲ್ಲಿ ನಿರಂತರವಾಗಿ ಪಾಲ್ಗೊಳ್ಳುವ ಮೂಲಕ ಸಮಾಜ ಸೇವೆಗೂ ಸೈ ಎನಿಸಿಕೊಂಡಿದ್ದಾರೆ. ಹೈನುಗಾರಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಪಶು ಆಹಾರ ಮಾರಾಟ ಮಳಿಗೆ ತೆರದು ಲಾಭ ಪಡೆಯುವ ಗುರಿ ಹೊಂದಿರುವುದು ದುಡಿಮೆಗೆ ಪರ್ಯಾಯ ಮಾರ್ಗ ಕಂಡಿರುವುದಕ್ಕೆ ಸಾಕ್ಷಿಯಾಗಿದೆ.

ಹಲವು ಪದಕ ಮುಡಿಗೆ: ಭಾರತೀಯ ಸೇನೆಗೆ ಸೇರಿ ರಾಜಸ್ಥಾನ, ಜಮ್ಮು-ಕಾಶ್ಮೀರ ಸೇರಿದಂತೆ ಹಲವೆಡೆ ಸಲ್ಲಿಸಿದ ಗಣನಿಯ ಸೇವೆಯನ್ನು ಎಂದಿಗೂ ಮರೆಯುವಂತಿಲ್ಲ. ಹಿಮಾಲಯ ಶ್ರೇಣಿಯಲ್ಲಿನ ಸೇವೆಗೆ ಉಚ್ಛತುಂಗ ಪರ್ವತ ಪದಕ, ಜಮ್ಮು-ಕಾಶ್ಮೀರ ಸೇವಾ ಪದಕ, ಸಿಯಾಚಿನ್ ಗ್ಲೇಶಿಯರ್ ಪದಕ, ಒಂಬತ್ತು ವರ್ಷದ ಸೇವೆಗೆ ನೀಡುವ ಪ್ರಶಸ್ತಿ, ಕೌಂಟರ್ ಇನ್ಸ್‌ರ್ಜನ್ಸಿ ಪದಕ ಒಳಗೊಂಡಂತೆ ಹಲವು ಪುರಸ್ಕಾರಗಳು ನವೀನ್‌ಕುಮಾರ್ ಅವರಿಗೆ ಲಭಿಸಿದ್ದು ದೇಶ ಸೇವೆಗೆ ಸಂದ ಗೌರವ ಎನ್ನಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net