ಸಂಘರ್ಷ - ಸವಾಲುಗಳನ್ನು ಎದುರಿಸಿದಾಗ ಉತ್ತಮ ಅನುವಾದ ಕೃತಿ ಸಾಧ್ಯ: ಕಂಬಾರ

Sahitya academy award
Published on

ಬೆಂಗಳೂರು: ಅನುವಾದಕರಿಗೆ ಸಂಘರ್ಷ ಹಾಗೂ ಹಲವು ಸವಾಲುಗಳಿದ್ದು, ಅವನ್ನು ಎದುರಿಸಿದಾಗ ಉತ್ತಮ ಅನುವಾದ ಕೃತಿ ರಚನೆ ಸಾಧ್ಯ ಎಂದು ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಸಾಹಿತ್ಯ ಅಕಾಡೆಮಿಯು ಭಾರತೀಯ ವಿದ್ಯಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ 2023 ನೇ ಸಾಲಿನ ಅನುವಾದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಭಾರತೀಯ ಶ್ರೀಮಂತ ಸಂಸ್ಕೃತಿಯನ್ನು ಪ್ರಚುರಪಡಿಸಲು ಅನುವಾದದಿಂದ ಸಾಧ್ಯ. ಈ ಕಾರ್ಯದಲ್ಲಿ ವಿಭಿನ್ನ ಸಂಸ್ಕೃತಿಯ ನಡುವೆ ಸಂಘರ್ಷ ಹಾಗೂ ಸವಾಲುಗಳು ಎದುರಾಗಲಿವೆ. ಆ ಎಲ್ಲವನ್ನು ಮೀರಿ ನಡೆದಾಗ ಉತ್ತಮ ಕೃತಿ ಹೊರಬರುತ್ತದೆ ಎಂದರು.

ಭಾರತೀಯ ಸಾಹಿತ್ಯದಲ್ಲಿ ಅನುವಾದಕರ ಪಾತ್ರ ಮಹತ್ವದ್ದಾಗಿದೆ. ಇವರಿಂದಾಗಿ ಹಲವು ಭಾಷೆಯ ಕೃತಿಗಳು ನಮಗೆ ಲಭ್ಯವಾಗಿವೆ. ಹಾಗೆಯೇ ನಮ್ಮ ರಾಮಾಯಣ, ಮಹಾಭಾರತ ಮತ್ತಿತರ ಕೃತಿಗಳೂ ಅನುವಾದದಿಂದಾಗಿ ಹೆಚ್ಚು ಓದುಗರನ್ನು ತಲುಪುವಂತಾಗಿದೆ ಎಂದು ಹೇಳಿದರು.

ಈ ಅನುವಾದ ಕಾರ್ಯದಲ್ಲಿ ಹೊರ ರಾಜ್ಯ ಹಾಗೂ ವಿದೇಶಗಳ ಬರಹಗಾರರ ನಡುವೆ ಸಂವಹನ ಉಂಟಾದರೆ ಉತ್ತಮ ಬಾಂಧವ್ಯ ಬೆಳೆಯುತ್ತದೆ. ಆ ಪ್ರದೇಶದ ಮಣ್ಣಿನ ಸೊಗಡು ಕೃತಿಯಲ್ಲಿ ಸೊಗಸಾಗಿ ವ್ಯಕ್ತವಾಗುತ್ತದೆ ಎಂದ ಅವರು, ಪ್ರಶಸ್ತಿ ಸ್ವೀಕರಿಸಿದ ಎಲ್ಲ ಅನುವಾದಕರನ್ನು ಅಭಿನಂದಿಸಿದರು.

ಅನುವಾದ ಸಲಭವಲ್ಲ: ಕೇಂದ್ರ ಸಾಹಿತ್ಯ ಅಕಾಡೆಮಿ ಉಪಾಧ್ಯಕ್ಷೆ ಕುಮುದ್ ಶರ್ಮಾ ಮಾತನಾಡಿ, ಅನುವಾದ ಎಷ್ಟು ಮಹತ್ವವೋ ಅಷ್ಟೇ ಕಠಿಣ ಕೆಲಸವಾಗಿದೆ. ಹಾಗಾಗು ಅನುವಾದ ಸುಲಭವಾದ ಕಾರ್ಯವಲ್ಲ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಹಿತ್ಯ ಜನಪ್ರಿಯವಾಗಬೇಕಾದರೆ ಅನುವಾದ ಕಾರ್ಯ ಅತ್ಯವಶ್ಯಕವಾಗಿದೆ ಎಂದ ಅವರು, ಇಂದಿನ ಈ ಕಾರ್ಯಕ್ರಮ ಭಾರತೀಯ ಭಾಷೆಗಳ ಅನುವಾದಕರ ಅದ್ಭುತ ಸಂಗಮವಾಗಿದೆ ಎಂದು ಬಣ್ಣಿಸಿದರು.

ಅನುವಾದಕರಾದ ಕೆ.ಕೆ.ಗಂಗಾಧರನ್(ಕನ್ನಡ), ಡಾ.ನಾಗರತ್ನ ಹೆಗ್ಡೆ (ಸಂಸ್ಕೃತ), ಪ್ರೊ.ರೀಟಾ ರಾಣಿ ಪಾಲಿವಾಲ್ (ಹಿಂದಿ), ಸುನೇತ್ರಾ ಗಜಾನನ ಜೋಗ್ (ಕೊಂಕಣಿ) ಸೇರಿ ಆಯ್ಕೆಯಾದ ಎಲ್ಲರಿಗೂ ಅನುವಾದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಕಾಡೆಮಿ ಅಧ್ಯಕ್ಷ ಮಾಧವ್ ಕೌಶಿಕ್, ಕಾರ್ಯದರ್ಶಿ ಕೆ.ಶ್ರೀನಿವಾಸಮೂರ್ತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net