

ಬೆಂಗಳೂರು: ಕೇಂದ್ರ ಸಂಸ್ಕೃತಿ ಇಲಾಖೆಯು ಶುಕ್ರವಾರ (ಜು. 12) ಸಾಹಿತ್ಯ ಅಕಾಡೆಮಿ ನೀಡುವ 2023ನೇ ಸಾಲಿನ ಅನುವಾದ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಿದೆ.
ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯಲ್ಲಿನ ಭಾರತೀಯ ವಿದ್ಯಾಭವನದ ಖಿಂಚ ಸಭಾಂಗಣದಲ್ಲಿ ಸಂಜೆ 5.30ಕ್ಕೆ ನಡೆಯಲಿರುವ ಸಮಾರಂಭದಲ್ಲಿ ವಿವಿಧ ಭಾಷೆಗಳ ಅನುವಾದ ಮಾಡಿರುವ 24 ಅನುವಾದಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಾಹಿತಿ ಡಾ. ಚಂದ್ರಶೇಖರ ಕಂಬಾರ, ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮಾಧವ್ ಕೌಶಿಕ್, ಉಪಾಧ್ಯಕ್ಷ ಕುಮುದ್ ಶರ್ಮಾ, ಕಾರ್ಯದರ್ಶಿ ಕೆ. ಶ್ರೀನಿವಾಸರಾವ್ ಇತರರು ಭಾಗವಹಿಸಲಿದ್ದಾರೆ.
ನಗರದ ಕಲಾ ಗ್ರಾಮದ ಎದುರಿನ ಸಾಹಿತ್ಯ ಅಕಾಡೆಮಿ ಪ್ರಾದೇಶಿಕ ಕಚೇರಿಯಲ್ಲಿ ಶನಿವಾರ (ಜು.13) ಬೆಳಗ್ಗೆ 10 ಗಂಟೆಗೆ ಅನುವಾದಕರ ಸಮ್ಮೇಳನ ಆಯೋಜಿಸಲಾಗಿದ್ದು, ಪ್ರಶಸ್ತಿ ಪುರಸ್ಕೃತ ಅನುವಾದಕರು ತಮ್ಮ ಅನುಭವ ನುಡಿಗಳನ್ನಾಡಲಿದ್ದಾರೆ ಎಂದು ಅಕಾಡೆಮಿ ತಿಳಿಸಿದೆ.