

* ಬಿಡದಿ ಕೆಪಿಸಿಎಲ್ ಘಟದಲ್ಲಿ ದುರ್ಘಟನೆ ನಾಲ್ವರ ಸಾವು
ಗಂಗಾಧರ್ ಬೈರಾಪಟ್ಟಣ ರಾಮನಗರ
ಬಿಡದಿಯಲ್ಲಿರುವ ಕೆಪಿಸಿಎಲ್‌ಗೆ ಸೇರಿದ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮಾಡುವ ಘಟಕದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದರೆ ತುತ್ತು ಅನ್ನಕ್ಕಾಗಿ ದೂರದ ಊರಿನಿಂದ ಬಂದು ಕೆಲಸ ಮಾಡುತ್ತಿದ್ದ ಕಾರ್ಮಿಕರ ಜೀವವನ್ನು ಉಳಿಸಬಹುದಿತ್ತೆ? ಎನ್ನುವ ಪ್ರಶ್ನೆಯೊಂದು ಈಗ ಹುಟ್ಟಿಕೊಂಡಿದೆ.
ಲಭ್ಯ ಮಾಹಿತಿ ಹೌದು ಎನ್ನುವ ಉತ್ತರವನ್ನು ನೀಡುತ್ತಿದೆ. ಅತಿ ದೊಡ್ಡ ಪ್ಲಾಂಟ್ ಇದಾಗಿದ್ದು, ಇಲ್ಲಿ ಕಾರ್ಮಿಕರ ಸುರಕ್ಷತೆಗಾಗಿ ಕೈಗೊಳ್ಳಬೇಕಾದ ಕನಿಷ್ಠ ಕ್ರಮಗಳನ್ನೂ ಕೈಗೊಳ್ಳದ ಕಾರಣ, ದಿಢೀರ್ ಎದುರಾದ ಅವಘಡದಲ್ಲಿ ನಾಲ್ವರು ಮೃತಪಟ್ಟು, ಓರ್ವ ಇನ್ನೂ ಜೀವ ಉಳಿಸಿಕೊಳ್ಳಲು ಹೋರಾಟ ಮಾಡುವಂತೆ ಆಗಿದೆ.
ಅತಿ ಸೂಕ್ಷ್ಮ ಮತ್ತು ಅಪಾಯಕಾರಿಯಾದ ಇಂತಹ ಕೆಲಸಗಳಿಗೆ ಪರಿಣಿತ ಕಾರ್ಮಿಕರನ್ನೇ ನೇಮಕ ಮಾಡಿಕೊಳ್ಳಬೇಕು. ಆದರೆ, ಘಟನೆಯಲ್ಲಿ ಮೃತಪಟ್ಟಿರುವ ಹಾಗೂ ಗಾಯಗೊಂಡಿರುವ ಕಾರ್ಮಿಕರು ಕೌಶಲ ಹೊಂದಿದ ಕಾರ್ಮಿಕರು. ಇದರ ಜತೆಗೆ ಅತಿ ಹೆಚ್ಚು ಶಾಖ ಉಳ್ಳ ಪ್ರದೇಶದಲ್ಲಿ ಕೆಲಸ ಮಾಡುವ ವೇಳೆ ಮುಂಜಾಗ್ರತಾ ಕ್ರಮವಾಗಿ ಫೈರ್‌ಮನ್ ಕಿಟ್ ಆಗಲಿ, ಅಲ್ಯೂಮಿನಿಯಂನಿಂದ ಸಿದ್ಧಪಡಿಸಿ ಪರ್ಸನಲ್ ಪ್ರೊಟೆಕ್ಷನ್ ಎಕ್ಯೂಪ್ಮೆಂಟ್(ಪಿಪಿಇ) ಆಗಲಿ ಇರಲೇ ಇಲ್ಲ. ಒಂದು ವೇಳೆ ಇವುಗಳಲ್ಲಿ ಯಾವುದಾದರೂ ಒಂದನ್ನು ಧರಿಸಿದ್ದೇ ಆಗಿದ್ದರೆ ಅಪಾಯದ ಮಟ್ಟವನ್ನು ಕಡಿಮೆ ಮಾಡಬಹುದಿತ್ತು ಎನ್ನಲಾಗುತ್ತಿದೆ. ಅಲ್ಲದೆ, ಈ ಸ್ಥಳದಲ್ಲಿ ಪರಿಣಿತ ಸೂಪರ್‌ವೈಸರ್ ಇರಲಿಲ್ಲ ಎಂದು ತಿಳಿದು ಬಂದಿದೆ.
ಬೈರಮಂಗಲ ಕ್ರಾಸ್ ಬಳಿ ಕೆಪಿಸಿಎಲ್‌ವತಿಯಿಂದ ಕಸದಿಂದ ವಿದ್ಯುತ್ ಉತ್ಪಾದನೆ ಮಾಡುವ ಘಟಕವನ್ನು ನಿರ್ಮಾಣ ಮಾಡಲಾಗಿದೆ. ಜ.4ರಂದು ನಡೆದ ಅವಘಡದಲ್ಲಿ ಗಾಯಗೊಂಡಿದ್ದ 5 ಮಂದಿ ಕಾರ್ಮಿಕರ ಪೈಕಿ 4 ಮಂದಿ ಕಾರ್ಮಿಕರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಉಮೇಶ್ ಕುಮಾರ್ ( 33) ಅಮಲೇಶ್ ಕಾಮತ್ (31), ತರುಣ್ ಕುಮಾರ್ ರೈ (29) ಲಕನ್ ಸಿಂಗ್ (28) ಗುರುವಾರ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಸಂಟೊನ ಸದಾಯ (34) ಎಂಬ ಕಾರ್ಮಿಕ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಉತ್ತರ ಭಾರತ ಮೂಲದ ಐವರು ಕಾರ್ಮಿಕರು ಘಟನೆಯಲ್ಲಿ ಸಿಲಿಕಿ ನಾಲ್ವರು ಮೃತಪಟ್ಟ ಹಿನ್ನೆಲೆಯಲ್ಲಿ ಸದ್ಯಕ್ಕೆ ನಡೆಯುತ್ತಿದ್ದ ಗ್ಯಾರಂಟಿ ಟೆಸ್ಟ್ ಅನ್ನು ಸ್ಥಗಿತಗೊಳಿಸಲಾಗಿದೆ. ಇದರ ಜತೆಗೆ ಇದರ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದ ಎಲ್ಲರೂ ಜಾಗಾ ಖಾಲಿ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಐಎಸ್‌ಜಿಇಸಿ ಕಂಪನಿಯ ಸುಧೀರ್ ಪಾಟಕ್ ಎನ್ನುವರನ್ನು ಈಗಾಗಲೇ ಬಂಧಿಸಲಾಗಿದೆ. ಉಳಿದಂತೆ ಇತರೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇವರೆಲ್ಲರೂ ನಾಪತ್ತೆಯಾಗಿದ್ದಾರೆ. ಇನ್ನು ಬಿಡದಿ ಪ್ಲಾಂಟ್ ಬಳಿ ಕೆಪಿಸಿಎಲ್‌ನ ಯಾವೊಬ್ಬ ಅಧಿಕಾರಿಯೂ ಮಾತನಾಡಲು ಸಿದ್ದರಿಲ್ಲ, ನಮಗೇನೂ ಗೊತ್ತಿಲ್ಲ, ಹಿರಿಯ ಅಧಿಕಾರಿಗಳನ್ನು ಕೇಳಿ ಎನ್ನುವ ಜಾಣ ಉತ್ತರವನ್ನು ಗೇಟಿನಲ್ಲಿಯೇ ನೀಡಿ ಕಳುಹಿಸುತ್ತಿದ್ದಾರೆ.
ಪ್ರಸ್ತುತ ವಸ್ತು ಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲು ಪ್ಲಾಂಟ್‌ನ ಮೇಲ್ವಿಚಾರಣೆಯಲ್ಲಿರುವ ಕೆಪಿಸಿಎಲ್‌ನ ಅಧೀಕ್ಷಕ ಇಂಜಿನಿಯರ್ ಅನಿತಾ ಅವರನ್ನು ಸಂಪರ್ಕಿಸಲಾಯಿತಾದರೂ, ಸಂಸ್ಥೆಗೆ ಇ - ಮೇಲ್ ಮಾಡಿದರೆ ನಂತರ ಅವರಿಂದ ಮಾಹಿತಿ ದೊರೆಯಲಿದೆ. ನಾನು ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಮಾಹಿತಿ ನೀಡಲು ನಿರಾಕರಿಸಿದರು.