

ಕುಂದಗೋಳ: ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಆಂಬುಲೆನ್ಸ್‌ನಲ್ಲಿಯೇ ಹೆರಿಗೆಯಾದ ಘಟನೆ ಬುಧವಾರ ರಾತ್ರಿ ನಡೆದಿದೆ.
ಗುಡೇನಕಟ್ಟಿ ಗ್ರಾಮದ ಆಫ್ರೀನ್ ದಾದಾಪೀರ ಅಜಮಕಾನವರ ಎಂಬ ಗರ್ಭಿಣಿಗೆ ಬುಧವಾರ ರಾತ್ರಿ 8.45ರ ಸುಮಾರಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಕುಂಟುಬಸ್ಥರು, ಆಂಬುಲೆನ್ಸ್‌ಗೆ ಕರೆ ಮಾಡಿದ್ದರು.
ಕೆಲ ಸಮಯದಲ್ಲೇ ಬಂದ ಆಂಬುಲೆನ್ಸ್‌ನಲ್ಲಿ ಗರ್ಭಿಣಿಯನ್ನು ಕುಂದಗೋಳ ಪಟ್ಟಣಕ್ಕೆ ಕರೆದೊಯ್ಯಲಾಗುತ್ತಿತ್ತು.
ಮಾರ್ಗಮಧ್ಯೆ ಹೆರಿಗೆ ನೋವು ತೀವ್ರವಾಗಿದ್ದರಿಂದ ಸಿಬ್ಬಂದಿ ಅಶೋಕ ಪೂಜಾರ ಮತ್ತು ಬಸವರಾಜ ರಾಥೋಡ ಅವರು ಆಂಬುಲೆನ್ಸ್ ನಿಲ್ಲಿಸಿ, ಸುರಕ್ಷಿತವಾಗಿ ಸಹಜ ಹೆರಿಗೆ ಮಾಡಿಸಿದರು.
ಆಫ್ರೀನ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ- ಮಗು ಆರೋಗ್ಯವಾಗಿದ್ದು, ಕುಂದಗೋಳ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.