

ರಾಮನಗರ : ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ಮಾಡಲು ನಿಷೇಧಿಸಿರುವ ಜಿಲ್ಲಾಧಿಕಾರಿ ಕ್ರಮವನ್ನು ಖಂಡಿಸಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಜ.6ರಂದು ಹಮ್ಮಿಕೊಂಡಿರುವ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುವಂತೆ ಮುಖಂಡರೊಂದಿಗೆ ಪೊಲೀಸ್ ಅಧಿಕಾರಿಗಳು ನಡೆಸಿದ ಸಂಧಾನಸಭೆ ವಿಫಲವಾಗಿದೆ.
ಜಿಲ್ಲಾ ಪೊಲೀಸ್ ಭವನದಲ್ಲಿ ಎಎಸ್‌ಪಿ ಸುರೇಶ್, ರಾಮಲಿಂಗಯ್ಯ, ಎಡಿಸಿ ಆರ್.ಚಂದ್ರಯ್ಯ, ಎಸಿ ಬಿನೋಯ್ ಸಮ್ಮುಖದಲ್ಲಿ ಶನಿವಾರ ಏರ್ಪಡಿಸಿದ್ದ ಸಭೆಯಲ್ಲಿ ಪ್ರತಿಭಟನೆ ಹಿಂತೆಗೆದುಕೊಂಡು ರೈತ ಸಂಘದ ಬೇಡಿಕೆಗಳ ಬಗ್ಗೆ ಜಿಲ್ಲಾಧಿಕಾರಿ ಜತೆ ಸಭೆ ನಡೆಸಿ ಚರ್ಚಿಸುವಂತೆ ಮನವಿ ಮಾಡಿದರು.
ಆದರೆ, ಮನವಿಯನ್ನು ತಿರಸ್ಕರಿಸಿ ಮಾತನಾಡಿದ ರಾಜ್ಯ ರೈತ ಸಂಘದ ವಿಭಾಗೀಯ ಅಧ್ಯಕ್ಷ ಮಲ್ಲಯ್ಯ, ಜಿಲ್ಲಾಧಿಕಾರಿ ಜಿಲ್ಲೆಯ ಮೊದಲ ಕೂಲಿಯಾಗಿದ್ದಾರೆ. ಕಂದಾಯ ಇಲಾಖೆಯು ರೈತರಿಗೆ ಸಂಬಂಧಿಸಿದ್ದಾಗಿದ್ದು, ಇಲಾಖೆಯಲ್ಲಿ ಯಾವ ಅರ್ಜಿಗಳೂ ವಿಲೇವಾರಿಯಾಗದೆ ರೈತರು ಹೈರಾಣಾಗಿದ್ದಾರೆ. ಇಂತಹ ಶೋಷಣೆಗಳನ್ನು ಪ್ರಶ್ನಿಸಬಾರದು ಎಂಬುದು ಸರ್ವಾಧಿಕಾರ ಮನಸ್ಥಿತಿ. ಇಡೀ ಜಿಲ್ಲೆಯ ಕೇಂದ್ರಸ್ಥಾನ ಜಿಲ್ಲಾಧಿಕಾರಿ ಆಡಳಿತ ಸೌಧವಾಗಿದ್ದು, ಜಿಲ್ಲೆಯ ಅನ್ಯಾಯಗಳನ್ನು ಇಲ್ಲಿಯೇ ಪ್ರಶ್ನಿಸಿ, ಪ್ರತಿಭಟಿಸಿ ನ್ಯಾಯ ಪಡೆದುಕೊಳ್ಳಲು ನಮಗೆ ಸಂವಿಧಾನ ಬದ್ಧ ಹಕ್ಕಿದೆ. ಅದನ್ನು ನಾವು ಮರುಸ್ಥಾಪಿಸುತ್ತೇವೆ ಎಂದರು.
ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಲಹೆಗಾರ ಕುಮಾರಸ್ವಾಮಿ, ರೈತ ಸಂಘದ ಜಿಲ್ಲಾಧ್ಯಕ್ಷ ತಿಮ್ಮೇಗೌಡ , ರಾಜ್ಯ ಸಂಚಾಲಕ ಚೀಲೂರು ಮುನಿರಾಜು ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶ ವಿರೋಧಿಸಿ ಇಷ್ಟೆಲ್ಲ ಪ್ರತಿಭಟನೆಗಳು ನಡೆಯುತ್ತಿದ್ದರೂ ಜಿಲ್ಲಾಧಿಕಾರಿ ಕನಿಷ್ಠ ಸೌಹಾರ್ದ ಸಭೆ ಕರೆದು ಚರ್ಚಿಸುವ ಔದಾರ್ಯ ತೋರಿಲ್ಲ. ಇಂತಹ ಜಿಲ್ಲಾಧಿಕಾರಿ ಆದೇಶವನ್ನು ನಾವು ನಿರಂತರವಾಗಿ ಹೋರಾಟಗಳನ್ನು ಹಮ್ಮಿಕೊಳ್ಳುವ ಮೂಲಕ ಉಲ್ಲಂಘಿಸುತ್ತೇವೆ. ಸಂವಿಧಾನ ಬಾಹಿರ ನಡೆಯನ್ನು ರೈತಸಂಘವು ಎಂದಿಗೂ ಸಹಿಸುವುದಿಲ್ಲ ಎಂದರು.
ಸಾಮಾಜಿಕ ಹೋರಾಟಗಾರ ಪ್ರಶಾಂತ್ ಹೊಸದುರ್ಗ, ರೈತ ಸಂಘದ ಚನ್ನಪಟ್ಟಣ ತಾಲೂಕು ಅಧ್ಯಕ್ಷ ನಾಗರಾಜು, ರವಿ, ಕೃಷ್ಣಯ್ಯ, ಗುರುಲಿಂಗ, ಮುಂತಾದವರು ಭಾಗವಹಿಸಿದ್ದರು.