ಗ್ರಾಮಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

mgd1
Published on

ಮಾಗಡಿ  : ಗ್ರಾಮ ಸಭೆಗಳಿಗೆ ಗೈರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವಂತೆ ಜಿಪಂ ಸಿಇಒಗೆ ಪತ್ರ ಬರೆಯುವುದಾಗಿ ಬಾಚೇನಹಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಿ ಬಾಯಿ ಧನಂಜಯನಾಯಕ್ ತಿಳಿಸಿದರು.

ತಾಲೂಕಿನ ಬಾಚೇನಹಟ್ಟಿ ಗ್ರಾಪಂ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ 2024-25 ನೇ ಸಾಲಿನ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿ, ಗ್ರಾಮ ಪಂಚಾಯಿಯಲ್ಲಿ ನಡೆಯುವ ಗ್ರಾಮ ಸಭೆಗಳಿಗೆ ಎಲ್ಲ ಇಲಾಖೆಯ ಅಧಿಕಾರಿಗಳು ಭಾಗವಹಿಸುವುದರಿಂದ ಸಮಸ್ಯೆ ಬಗೆಹರಿಯಲಿವೆ. ಸರ್ಕಾರಿ ಸೌಲಭ್ಯ ಪಡೆದುಕೊಳ್ಳಲು ಮಾಹಿತಿ ಸಿಗಲಿದೆ ಎಂದು ನಾಗರಿಕರು ಗ್ರಾಮಸಭೆಗೆ ಬಂದರೆ ಅಧಿಕಾರಿಗಲೇ ಇಲ್ಲದ ಮೇಲೆ ಸಭೆಗಳನ್ನು ಮಾಡಿದರೆ ಪ್ರಯೋಜನವಾದರೂ ಏನು?. ಕಳೆದ ಭಾರಿ ಗ್ರಾಮಸಭೆಯಲ್ಲಿ ಇದೇ ರೀತಿಯಾದಾಗ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಸಭೆಗೆ ಕಡ್ಡಾಯವಾಗಿ ಬರುವಂತೆ ಮನವಿ ಮಾಡಿದರೂ ಬಂದಿಲ್ಲ. ಈ ಸಂಬಂಧ ಮುಂದಿನ ಸಭೆಗೂ ಬಾರದೆ ಇರುವ ಅಧಿಕಾರಿಗಳ ಕಚೇರಿಗೆ ತೆರಳಿ ವಿಭಿನ್ನವಾಗಿ ಹಾರ ಹಾಕಿ ಗ್ರಾಮಸಭೆಗೆ ಸ್ವಾಗತಿಸುವುದಾಗಿ ತಿಳಿಸಿದರು.

ಸರ್ಕಾರ ಇ-ಖಾತೆ, ಬಿ ಖಾತೆಯನ್ನು ರದ್ದು ಮಾಡಿರುವುದರಿಂದ ಸಾವಿರಾರು ನಾಗರಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ಪ್ರತಿ ನಿತ್ಯ ನಾಗರಿಕರು ಗ್ರಾಪಂಗೆ ಅಲೆಯುವಂತಾಗಿದೆ. ಉಪ ಗ್ರಾಮಗಳನ್ನಾಗಿ ಪರಿವರ್ತನೆ ಮಾಡಲು ಇದಕ್ಕೆ ಬೇಕಾದ ಸಮರ್ಪಕ ದಾಖಲಾತಿಗಳನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ನೀಡಿದರೂ ಕಂದಾಯ ಗ್ರಾಮವನ್ನಾಗಿ ಮಾಡಲು ವಿಳಂಬಮಾಡುತ್ತಿದ್ದು, ಕೂಡಲೇ ಇ-ಖಾತೆ, ಬಿ-ಖಾತೆ ಮಾಡಲು ಜಿಲ್ಲಾಧಿಕಾರಿಗಳು ಆದೇಶಿಸಬೇಕು ಎಂದು ತಿಳಿಸಿದರು.

ಬಾಚೇನಹಟ್ಟಿ ಗ್ರಾಪಂ ವ್ಯಾಪ್ತಿಯಲ್ಲಿ ತೀರ ಕಡುಬಡವರಿದ್ದು, ಅಲ್ಲಿ ಯಾವುದೆ ಗಾರ್ಮೆಟ್ಸ್, ಖಾಸಗಿ ಫ್ಯಾಕ್ಟರಿಗಳು ಇಲ್ಲ. ಸಾವಿರಾರು ಮಂದಿ ನಿರುದ್ಯೋಗಿಗಳು ಉದ್ಯೋಗ ಅರಸಿ ಬೆಂಗಳೂರಿಗೆ ವಲಸೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಿ ಸ್ಥಳೀಯವಾಗಿ ಉದ್ಯೋಗ ಕಲ್ಪಿಸಲು ಸಾಕಷ್ಟು ಯೋಜನೆಗಳನ್ನು ರೂಪಿಸಿದರು ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಮಾಹಿತಿ ನೀಡದೆ ಇರುವುದು ಬೇಸರ ಮೂಡಿಸಿದೆ ಎಂದು ಆರೋಪಿಸಿದರು.

ಪ್ರತಿ ಮನೆಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಜಲಜೀವನ್ ಮಿಷನ್ ಯೋಜನೆಯಡಿ ನಡೆಯುತ್ತಿರುವ ಪೈಪು ಲೈನ್ ಕಾಮಗಾರಿ ಕಳಪೆಯಿಂದ ಕೂಡಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸದೆ ನಿರ್ಲಕ್ಷ್ಯಿಸಿದರೆ ತನಿಖೆಗೆ ಆದೇಶಿಸುವುದಾಗಿ ಎಚ್ಚರಿಕೆ ನೀಡಿದರು.

ಸದಸ್ಯರಾದ ಯೋಗೇಶ್, ಲಕ್ಷ್ಮಣ, ಧರ್ಮನಾಯ್ಕ, ವೆಂಕಟಕ್ಷ್ಮಮ್ಮ, ರಂಗಮ್ಮ, ಚಂದ್ರುಬಾಯಿ, ವಿಜಯ, ಮಾದಮ್ಮ, ಲಕ್ಷ್ಮಣ, ಶೋಭಾರಾಣಿ, ಗಂಗಮ್ಮ, ಗಿರಿಜಮ್ಮ, ರೇಷ್ಮೆ ಇಲಾಖೆ ಸುಲ್ತಾನ್ ಬಾಬು, ಪಿಡಿಒ ಪುಟ್ಟರಾಮಯ್ಯ, ಬೈರಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net