

ತುಮಕೂರು: ನಗರದ ಶ್ರೀಸಿದ್ಧಾರ್ಥ ವೈದ್ಯಕೀಯ ಕಾಲೇಜು ಎಚ್.ಎಂ.ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಡಿ.14ರಂದು ಶನಿವಾರ ಬೆಳಗ್ಗೆ 10.30ಕ್ಕೆ ಸಾಹೇ(ಶ್ರೀಸಿದ್ಧಾರ್ಥ ಆಕಾಡೆಮಿ ಆಫ್ ಹೈಯರ್ ಎಜುಕೇಷನ್) ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವ ಆಯೋಜಿಸಲಾಗಿದೆ ಎಂದು ಕುಲಪತಿ ಡಾ.ಕೆ.ಬಿ.ಲಿಂಗೇಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
13ನೇ ಸಾಹೇ ಘಟಿಕೋತ್ಸವದಲ್ಲಿ ಮಾಜಿ ಕೇಂದ್ರ ಸಚಿವೆ, ಮಾಜಿ ರಾಜ್ಯಪಾಲೆ ಮಾರ್ಗರೆಟ್ಆಳ್ವ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತಿದೆ. ನವದೆಹಲಿಯ ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ ಅಧ್ಯಕ್ಷ ಪ್ರೊ.ಟಿ.ಜಿ.ಸಿತಾರಾಮ್ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದರು.
ಸಾಹೇ ವಿವಿ ಕುಲಾಧಿಪತಿಗಳು ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ ಪದವಿ ಘಟಿಕೋತ್ಸವದಲ್ಲಿ ಪದವಿ ಪ್ರಮಾಣ ಗೌಪ್ಯತೆ ಭೋದಿಸಿ, ಪ್ರಮಾಣಪತ್ರ ವಿತರಿಸಲಿದ್ದಾರೆ ಎಂದರು.
ಕುಲಸಚಿವ ಡಾ.ಎಂ.ಝೆಡ್ ಕುರಿಯನ್ ಮಾತನಾಡಿ, ಸಾಹೇ ಬೆಳೆದು ಬಂದ ಹಾದಿ ಹಾಗೂ ನ್ಯಾಕ್ ಎ+ ಪಡೆದಿರುವ ಕುರಿತು ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲಿ ಸಾಹೇ ವಿವಿ ಅಂತಾರಾಷ್ಟ್ರೀಯ ರ್ಯಾಂಕ್ ಪಟ್ಟಿಯಲ್ಲಿ ಬರುವ ಎಲ್ಲಾ ರೀತಿಯ ಪ್ರಯತ್ನಗಳು ನಡೆಸುತ್ತಿದೆ ಎಂದರು.
ಇತ್ತೀಚೆಗೆ ಅಮೆರಿಕಾದ ಅವಲಾನ್ ವೈದ್ಯಕಿಯ ವಿವಿಯೊಂದಿಗೆ ಸಾಹೇ ವಿವಿ ಒಪ್ಪಂದ ನಡೆಸಿತ್ತು. ಅದರ ಒಪ್ಪಂದದ ಪ್ರಕಾರ ಮುಂದಿನ ಜನವರಿ ಮಾಹೆಯಲ್ಲಿ ವೈದ್ಯಕಿಯ ಆನ್ಲೈನ್ ತರಗತಿಗಳನ್ನು ನಡೆಸಲು ಸಕಲ ಸಿದ್ಧತೆ ನಡೆಸಲಾಗಿದೆ. ಅವಲಾನ್ ವಿವಿಯ ವಿದ್ಯಾರ್ಥಿಗಳು ಎರಡು ವರ್ಷಗಳ ಕಾಲ ಸಾಹೇ ವಿವಿಯಲ್ಲಿ ಆನ್ಲೈನ್ ಮೂಲಕ ಬೋಧನಾ ಮತ್ತು ಪ್ರಾಯೋಗಿಕ ತರಗತಿಗಳು ಪಡೆದುಕೊಳ್ಳುತ್ತಾರೆ ಎಂದು ಸಾಹೇ ವಿವಿಯ ಕುಲಾಧಿಪತಿ ಸಲಹೆಗಾರ ಡಾ.ವಿವೇಕ್ ವೀರಯ್ಯ ತಿಳಿಸಿದರು.
ಎಸ್ಎಸ್ಐಟಿ ಪ್ರಾಚಾರ್ಯ ಡಾ.ಎಂ.ಎಸ್. ರವಿಪ್ರಕಾಶ ಮಾತನಾಡಿ, ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಲು ಶೇ.80ರಷ್ಟು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಾಗಿರುತ್ತಾರೆ. ಅತೀ ಹೆಚ್ಚು ರ್ಯಾಂಕ್ ಪಡೆದವರಲ್ಲಿ ಅವರೇ ಮೇಲುಗೈ. ಕಳೆದ ಎರಡು ವರ್ಷದ ಹಿಂದೆ ಜಾಗತಿಕ ಮಟ್ಟದಲ್ಲಿ ಉದ್ಯೋಗ ಕಡಿತ ಹಿನ್ನೆಲೆಯಲ್ಲಿ ಇಂಜಿನಿಯರಿಂಗ್ ಕ್ಷೇತ್ರದಲ್ಲಿಯೂ ಶೇ.20ರಷ್ಟು ಮಾತ್ರ ಕ್ಯಾಂಪಸ್ ಪ್ಲೇಸ್ಮೆಂಟ್ ಇತ್ತು. ಈ ಬಾರಿ ಕ್ಯಾಂಪಸ್ ಉದ್ಯೋಗ ಅವಕಾಶ ಶೇ.60ರಷ್ಟು ಹೆಚ್ಚಾಗುವ ನಿರೀಕ್ಷೆ ಎಂದರು.
ಸಾಹೇ ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ನಿಯಂತ್ರಕ ಡಾ.ಗುರುಶಂಕರ್, ವೈದ್ಯಕೀಯ ಕಾಲೇಜು ಪ್ರಾಚಾರ್ಯ ಡಾ.ಸಾಣಿಕೊಪ್ಪ, ಡೆಂಟಲ್ ಕಾಲೇಜು ಪ್ರಾಚಾರ್ಯ ಡಾ.ಬಿ.ಪ್ರವಿಣ್ ಕುಡುವ, ವೈದ್ಯಕೀಯ ಕಾಲೇಜು ಉಪಪ್ರಾಚಾರ್ಯ ಡಾ.ಜಿ.ಎನ್.ಪ್ರಭಾಕರ್, ಉಪ ಕುಲಸಚಿವ ಡಾ.ಸುದೀಪ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಇದ್ದರು.
ಇಂಜಿನಿಯರಿಂಗ್,ವೈದ್ಯಕೀಯ, ದಂತ ವೈದ್ಯಕೀಯ, ಪಿಎಚ್.ಡಿ ಸೇರಿದಂತೆ ಒಟ್ಟು 876 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಮಾಡಲಾಗುವುದು.
ಇಂಜಿನಿಯರಿಂಗ್- 6, ವೈದ್ಯಕೀಯ- 1, ದಂತ ವೈದ್ಯಕೀಯ -2, ಎಂಸಿಎ- ವಿಭಾಗದಲ್ಲಿ 1ಚಿನ್ನದ ಪದಕ ಪ್ರದಾನ ಮಾಡಲಾಗುತ್ತಿದೆ.
ಡಾಕ್ಟರೇಟ್ ಪದವಿ- 24, ಇಂಜಿನಿಯರಿಂಗ್-60, ವೈದ್ಯಕೀಯ-147, ದಂತ ವೈದ್ಯಕೀಯ-49 ಸೇರಿದಂತೆ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ವಿತರಿಸಲಾಗುತ್ತದೆ. ಅತ್ಯುತ್ತಮ ಶ್ರೇಣಿಯ ವಿದ್ಯಾರ್ಥಿಗಳು. ಇಂಜಿನಿಯರಿಂಗ್- 1, ವೈದ್ಯಕಿಯ- 1 ಹಾಗೂ ದಂತ ವೈದ್ಯಕೀಯ- 1 ಪ್ರಶಸ್ತಿ ಪ್ರದಾನ ನಡೆಯಲಿದೆ.