ಸ್ಟ್ರೈಕ್​ ಬಗ್ಗೆ ಮಾತಾಡೋಕೆ ಅವರ್ಯಾರ್ರಿ... ಅವ್ರನ್ನ ನಾನು ನಾಯಿ ಅಂತೀನಿ ಎಂದ ವಾಟಾಳ್​!

vatal
Published on

ಮೈಸೂರು: ಮರಾಠ ಪ್ರಾಧಿಕಾರ ವಿರೋಧಿಸಿ ರಾಜ್ಯದ ಕೆಲವು ಕಡೆಗಳಲ್ಲಿ ಪ್ರತಿಭಟನೆಗಳು ಮುಂದುವರೆದಿವೆ. ಈ ನಡುವೆಯೇ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹಾಗೂ ಸಾ.ರಾ ಗೋವಿಂದ್ ನೇತೃತ್ವದಲ್ಲಿ ಮೈಸೂರು-ಬೆಂಗಳೂರು ಹೆದ್ದಾರಿ ತಡೆದು ಪ್ರತಿಭಟನೆ ಇಂದು ಭಾರಿ ಪ್ರತಿಭಟನೆ ನಡೆಸಲಾಗಿದೆ.

ಮೈಸೂರಿನ ಕೊಲಂಬಿಯಾ ಏಷ್ಯಾ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಇವರ ನೇತೃತ್ವದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಸದಸ್ಯರು ಭಾಗಿಯಾಗಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಎಲ್ಲಾ ಮುಖಂಡರ ವಿರುದ್ಧ ವಾಟಾಳ್​ ನಾಗರಾಜ್​ ಆಕ್ರೋಶ ವ್ಯಕ್ತಪಡಿಸಿದರು. ಮೊದಲಿಗೆ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪನವರ ವಿರುದ್ಧ ಮಾತನಾಡಿದ ವಾಟಾಳ್​, ಮುಖ್ಯಮಂತ್ರಿಗಳೇ ನೀವು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದೀರಿ. ನಿಮಗೆ ಕನ್ನಡದ ಬಗ್ಗೆ ಯಾವುದೇ ಅಭಿಮಾನವಿಲ್ಲ. ಮರಾಠಾ ಪ್ರಾಧಿಕಾರ ರಚನೆ ಆದೇಶ ಹಿಂಪಡೆಯದಿದ್ದರೆ ಕರ್ನಾಟಕ ಬಂದ್ ಅನಿವಾರ್ಯ ಎಂದು ಎಚ್ಚರಿಸಿದರು.

ಮಾತ್ರವಲ್ಲದೇ ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್‌‌ನಲ್ಲಿ ಕರಾಳ ದಿನ ಆಚರಣೆ ಮಾಡುವುದಾಗಿಯೂ ಹೇಳಿದರು.

ಇಷ್ಟು ಹೇಳಿದ ವಾಟಾಳ್​ ಆಕ್ರೋಶ ಶಾಸಕರಾದ ರೇಣುಕಾಚಾರ್ಯ ಹಾಗೂ ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ ತಿರುಗಿತು. ಇವರಿಬ್ಬರೂ ಪ್ರತಿಭಟನೆ ಮಾಡುವ ವಿರುದ್ಧವಾಗಿ ಹೇಳಿಕೆ ನೀಡಿದ್ದನ್ನು ಉಲ್ಲೇಖಿಸಿದ ವಾಟಾಳ್​, ಈ ಇಬ್ಬರು ಯಾರು ಎಂದು ಅರ್ಥವಾಗಿಲ್ಲ. ಮಿನಿಸ್ಟರ್​ಗಳು, ಎಂಪಿಗಳು ಸುಮ್ಮನಿರುವಾಗ ಮಾತನಾಡಲು ಇವರು ಯಾರು ಎಂದರು.

ತಮ್ಮ ವಾಗ್ದಾಳಿಯನ್ನು ಇನ್ನೂ ಮುಂದುವರೆಸಿದ ವಾಟಾಳ್​. ಇವರಿಬ್ಬರು ಯಾರು ಅಂತಾ ನನಗೆ ಗೊತ್ತಿಲ್ಲ. ಅದಕ್ಕೆ ಇವರಿಗೆ ನಾಯಿಗಳು ಎಂದು ಹೆಸರಿಟ್ಟಿದ್ದೇನೆ. ನಾಯಿಗಳು ಬೊಗಳಿದರೆ ಜನರು ಉತ್ತರ ಕೊಡುತ್ತಾರೆ. ನಾವು ನಾಯಿಗಳಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದರು!

ಕರ್ನಾಟಕದಲ್ಲಿ ಮರಾಠ ಪ್ರಾಧಿಕಾರ ಮಾಡಬೇಡಿ. ಹಾಗೇನಾದರೂ ಆದರೆ, ಮುಂದೆ ತಮಿಳು, ತೆಲಗು ಎಲ್ಲರೂ ಕೇಳುತ್ತಾರೆ. ಮರಾಠಿಗರಿ ಮಾಡಲು ಸಿಎಂಗೆ ಸಲಹೆ ಕೊಟ್ಟವರು ಯಾರೋ! ಒಂದು ವೇಳೆ ಮರಾಠಿಗರಿಗೆ ಸಹಾಯ ಮಾಡಬೇಕಾದರೆ ಬೇರೆ ರೂಪದಲ್ಲಿ ಮಾಡಿ. ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಿ. ಪ್ರಾಧಿಕಾರ ಮಾಡಿ ರಾಜಕೀಯ ಲಾಭವನ್ನ ಪಡೆಯಬೇಡಿ ಎಂದು ಸಾ.ರಾ.ಗೋವಿಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net