ಇಲ್ಲಿದೆ ನೋಡಿ ಫೋಟೋ ಅಸಲಿಯತ್ತು! ಭಾರತ ಕಂಡ ಅತ್ಯಂತ ಕೆಟ್ಟ ರಾಜಕಾರಣಿ ಎನಿಸಿಕೊಂಡವರಾರು?

rahulgandhi
Published on

ನವದೆಹಲಿ: 'ಅಯ್ಯೋ ಈ ರೈತ ಸತ್ತೇ ಹೋದನೇನೋ'... 'ಅಬ್ಬಾ... ನನಗಂತೂ ಈ ರೈತನಿಗೆ ಏನಾಯಿತೋ ಎಂದು ನೆನೆದೇ ಅಳುಬರುತ್ತಿದೆ'... 'ಛೇ... ಇಂಥ ಪ್ರಧಾನಿ ಇರೋತನಕ ಹೀಗೆಯೇ'... 'ದುರಹಂಕಾರಿ ಪ್ರಧಾನಿ'... ಹೀಗೇ ನಾನಾ ವಿಧದಲ್ಲಿ ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಬಾರಿ ವೈರಲ್​ ಆಗುತ್ತಿದೆ.

ಸಾಲದು ಎಂಬುದಕ್ಕೆ ಅಮ್ಮನ ಜತೆ ಅಮೆರಿಕ ಪ್ರವಾಸ ಮುಗಿಸಿ, ಫ್ರೆಷ್​ ಆಗಲು ಗೋವಾಕ್ಕೆ ತೆರಳಿರೋ ಸಂಸದ ರಾಹುಲ್​ ಗಾಂಧಿ ಕೂಡ ಈ ರೈತನ ಬಗ್ಗೆ ಅತೀವ ಕಾಳಜಿ ತೋರಿಸಿ ಟ್ವೀಟ್​ ಮಾಡಿದ್ದಾರೆ. ಜತೆಗೆ ಪ್ರಿಯಾಂಕಾ ಗಾಂಧಿಯೂ ಹಿಂದೆ ಬೀಳದೆ ಚಿತ್ರದಲ್ಲಿರುವ ರೈತನ ಬಗ್ಗೆ ಅಪಾರ ಕನಿಕರ ತೋರಿದ್ದಾರೆ.

ಕೇಂದ್ರ ಸರ್ಕಾರ ಮಾಡಿದ ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರು ಬೀದಿಗಳಿದು ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಓರ್ವ ರೈತನ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದಂತೆ ಕಾಣಿಸುವ ಫೋಟೋ ಇದಾಗಿದ್ದು, ಈ ರೈತನ ಪರವಾಗಿ ಎಲ್ಲೆಡೆಯಿಂದ ಅನುಕಂಪದ ಅಲೆಗಳು ಹರಿದಾಡುತ್ತಿತ್ತು, ರೈತ ಬದುಕಿದ್ದಾನೋ, ಇಲ್ಲವೋ ಎಂಬ ಸಂದೇಶಗಳೇ ಬಿತ್ತರವಾಗುತ್ತಿವೆ.

ಇದಕ್ಕೆ ಶೀರ್ಷಿಕೆ ಬರೆದಿರುವ ರಾಹುಲ್ ಗಾಂಧಿ ''ತುಂಬಾ ದುಃಖದ ಫೋಟೋ. ನಮ್ಮ ಘೋಷಣೆ 'ಜೈ ಜವಾನ್ ಜೈ ಕಿಸಾನ್', ಆದರೆ ಇಂದು ಪ್ರಧಾನಿ ಮೋದಿ ಅವರ ದುರಹಂಕಾರದಿಂದಾಗಿ ಯೋಧನು ರೈತನ ವಿರುದ್ಧ ನಿಲ್ಲುವಂತೆ ಮಾಡಿತು. ಇದು ತುಂಬಾ ಅಪಾಯಕಾರಿ'' ಎಂದು ಟ್ವೀಟ್ ಮಾಡಿದ್ದಾರೆ.

ಆದರೆ ಅಸಲಿಯತ್ತು ಏನೆಂದು ವಿಡಿಯೋ ಮೂಲಕ ಬಿಜೆಪಿ ಪ್ರತ್ಯುತ್ತರ ನೀಡಿದ್ದು, ಇದೇ ದೃಶ್ಯದ ವಿಡಿಯೋ ಹರಿಬಿಟ್ಟಿದ್ದಾರೆ. ಕರೊನಾವೈರಸ್​ ಲೆಕ್ಕಿಸದೇ ರೈತರು ಅಸಂಖ್ಯ ರೀತಿಯಲ್ಲಿ ಗುಂಪು ಗುಂಪಾಗಿ ಸೇರಿದ್ದರಿಂದ ಅವರನ್ನು ಚದುರಿಸಲು ಪೊಲೀಸರು ಹೊಡೆಯುವಂತೆ ಪೋಸ್​ ಕೊಟ್ಟಿದ್ದಾರಷ್ಟೇ. ಆದರೆ ಆ ರೈತನಿಗೆ ಎಳ್ಳಷ್ಟೂ ಅಪಾಯ ಮಾಡಿಲ್ಲ ಎನ್ನುವ ಅಸಲಿ ವಿಡಿಯೋ ಇದಾಗಿದೆ.

ಈ ಕುರಿತು ಬಿಜೆಪಿಯ ಐಟಿ ಸೆಲ್‌ನ ಮುಖ್ಯಸ್ಥ ಅಮಿತ್ ಮಾಲ್ವಿಯಾ ಕೂಡ ತಿರುಗೇಟು ನೀಡಿದ್ದು, ರಾಹುಲ್ ಗಾಂಧಿ ಪೋಸ್ಟ್ ಮಾಡಿರುವ ಫೋಟೋವಿನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಅಮಿತ್ ಮಾಲ್ವಿಯಾ ''ರಾಹುಲ್ ಗಾಂಧಿ ಬಹಳ ಸಮಯದ ನಂತರ, ಭಾರತ ಕಂಡಂತಹ ಅತ್ಯಂತ ಕೆಟ್ಟ ವಿರೋಧ ಪಕ್ಷದ ನಾಯಕರಾಗಿರಬೇಕು' ಎಂದು ಬರೆದಿದ್ದಾರೆ.

ಅದೇ ರೀತಿ ಈ ಫೋಟೋ ಹಾಕಿ ಜಾಲತಾಣದಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಯವರಂತೆ ವರ್ತಿಸುತ್ತಿರುವವರ ವಿರುದ್ಧವೂ ಬಿಜೆಪಿ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net