

ಬೆಂಗಳೂರು: ನಿಶ್ಚಿತಾರ್ಥಕ್ಕೆ ಹಾಲ್ ಬುಕ್ ಮಾಡಿ ಬರುತ್ತಿದ್ದಾಗ ಮಾರ್ಗಮಧ್ಯೆ ವಿದ್ಯುತ್ ಟ್ರಾನ್ಸ್ಫಾರ್ಮರ್ ಸ್ಫೋಟಗೊಂಡಿದ್ದು, ಶಿವರಾಜ್ ಹಾಗೂ ಅವರ ಪುತ್ರಿ ಚೈತನ್ಯ (18) ಇಬ್ಬರಿಗೂ ಬೆಂಕಿ ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ಘಟನೆ ಬುಧವಾರ (ಮಾ.23) ನಡೆದಿತ್ತು. ಆದರೆ ಇದೀಗ ಇಬ್ಬರೂ ಇಹಲೋಕ ತ್ಯಜಿಸಿದ್ದಾರೆ.
ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಇವರು ಬೆಂಗಳೂರಿನ ಮಂಗನಹಳ್ಳಿ ಬಳಿ ಹಂಪ್ ಹತ್ತಿರ ವಾಹನದ ವೇಗ ತಗ್ಗಿಸಿದ ಸಂದರ್ಭದಲ್ಲೇ ಅಲ್ಲಿದ್ದ ಟ್ರಾನ್ಸ್ಫಾರ್ಮರ್ ಸ್ಫೋಟಗೊಂಡಿದೆ. ಆಗ ಅದರಲ್ಲಿನ ಆಯಿಲ್ ಸಮೇತ ಬೆಂಕಿ ಸಿಡಿದಿದ್ದು, ಇಬ್ಬರಿಗೂ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಹೊತ್ತಿಕೊಂಡು ಗಾಯಗೊಂಡ ಇವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಲ್ಯಾಣ ಮಂಟಪ ಬುಕ್ ಮಾಡಿ, ಒಂದಿಷ್ಟು ಬಟ್ಟೆ ಖರೀದಿಸಿಕೊಂಡು ಬರುತ್ತಿದ್ದಾಗಲೇ ಈ ದುರಂತ ಸಂಭವಿಸಿದೆ. ಕುಟುಂಬಸ್ಥರಿಗೆ 20 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದ್ದು, ಒಂದು ಕೋಟಿ ರೂಪಾಯಿ ಪರಿಹಾರಕ್ಕೆ ಪ್ರತಿಭಟನೆ ನಡೆಸಲಾಗುತ್ತಿದೆ.
ಎಚ್ಚರಿಕೆ ವಹಿಸ್ತೇವೆ ಎಂದ ಸಚಿವರು
ಘಟನೆಯ ಕುರಿತು ಇಂಧನ ಸಚಿವ ಸುನೀಲ್ ಕುಮಾರ್ ಅವರು ವಿಧಾನಸಭೆಯಲ್ಲಿ ನೀಡಿರುವ ಮಾಹಿತಿಯನ್ನು ಗಮನಿಸಿದರೆ ಇದಕ್ಕೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೇ ಕಾರಣ ಎಂಬ ಅರಿವಾಗುತ್ತದೆ. ಏಕೆಂದರೆ ಅವರು ಹೇಳಿದ್ದೇನೆಂದರೆ, "ಆಯಿಲ್ ಲೀಕ್ ಆಗಿ ಟಿಸಿ ಬ್ಲಾಸ್ಟ್ ಆಗಿದೆ. ಈ ಸಂಬಂಧ ನಮಗೆ 12.50ಕ್ಕೆ ದೂರು ಬಂದಿತ್ತು. 1912 ಗೆ ಕರೆ ಮಾಡಿದ್ದ ಸಾರ್ವಜನಿಕರು ಟಿಸಿಯಲ್ಲಿ ಹೊಗೆಯಾಡುತ್ತಿದೆ ಎಂದು ತಿಳಿಸಿದ್ದರು.ಸಚಿವ ಸುನೀಲ್ ಕುಮಾರ್ಕೂಡಲೇ ನಮ್ಮ ಸಿಬ್ಬಂದಿ ಟಿಸಿ ದುರಸ್ತಿ ಮಾಡಿದ್ದರೆ ಈ ಅವಘಡ ಸಂಭವಿಸುತ್ತಿರಲಿಲ್ಲ. ಆದರೆ, ಮಧ್ಯಾಹ್ನ 3.10 ಕ್ಕೆ ಇದು ಸ್ಟೋಟಗೊಂಡಿದೆ' ಎಂದಿದ್ದಾರೆ.
ಇನ್ಮುಂದೆ ಇಂತಹ ಘಟನೆ ಆಗದಂತೆ ಮುನ್ನೆಚ್ಚರಿಕೆ ವಹಿಸಲು ದುರಸ್ತಿಗೆ ಬಂದಿರುವ ಟಿಸಿ ಆಡಿಟ್ ಮಾಡಲು ಸೂಚನೆ ನೀಡಿದ್ದೇನೆ. 15 ವರ್ಷಕ್ಕಿಂತ ಹಳೆಯ ಟಿಸಿ ಪಾದಚಾರಿ ಮಾರ್ಗದಲ್ಲಿರುವುದು ಮತ್ತು ಅಪಾಯಕಾರಿ ಟಿಸಿ ಬಗ್ಗೆಯೂ ಆಡಿಟ್ ಮಾಡಲಾಗುತ್ತದೆ. ಆಡಿಟ್ ವರದಿ ನೋಡಿ ಟಿಸಿ ಬದಲಾವಣೆ ಕುರಿತು ಕ್ರಮ ವಹಿಸಲಾಗುತ್ತದೆ. ಹಾಗೆಯೇ ನಿನ್ನೆಯ ಘಟನೆ ಕುರಿತು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಎಂಡಿ ಜೊತೆ ಮಾತನಾಡಲಾಗುತ್ತದೆ ಎಂದಿದ್ದಾರೆ. ಆದರೆ ಮದುವೆಯ ಸಂಭ್ರಮದಲ್ಲಿದ್ದ ಈ ಮನೆಯವರ ಕಣ್ಣೀರು ಒರೆಸುವುದು ಸಾಧ್ಯವೆ?