ಕೋರ್ಟ್‌ ಆದೇಶಕ್ಕಿಲ್ಲ ಕಿಮ್ಮತ್ತು: ಮಂಗಳೂರಿನ 2 ಕಾಲೇಜುಗಳಿಗೆ ರಜೆ- ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಡೋಲಾಯಮಾನ

mangalore
Published on

ಮಂಗಳೂರು: ತನ್ನ ಅಂತಿಮ ಆದೇಶದವರೆಗೆ ಕಾಲೇಜಿನ ಸಮವಸ್ತ್ರವನ್ನೇ ಪಾಲನೆ ಮಾಡುವಂತೆ ಹೈಕೋರ್ಟ್‌ ನೀಡಿರುವ ಮಧ್ಯಂತರ ಆದೇಶಕ್ಕೆ ಕಿಮ್ಮತ್ತು ಕೊಡದ ವಿದ್ಯಾರ್ಥಿನಿಯರು ಹಿಜಾಬ್‌ ಬೇಕೆಂದು ಕಾಲೇಜುಗಳಲ್ಲಿ ಪಟ್ಟುಹಿಡಿಯುತ್ತಿದ್ದಾರೆ. ವಿನಾಕಾರಣ ಗಲಭೆ ಸೃಷ್ಟಿಸುವ ಸಲುವಾಗಿಯೇ ಈ ಮುಗ್ಧ ವಿದ್ಯಾರ್ಥಿನಿಯರನ್ನು ಬಲಿಪಶು ಮಾಡಲಾಗುತ್ತಿದ್ದು, ಇದರಿಂದಾಗಿ ಉಳಿದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಡೋಲಾಯಮಯವಾಗುತ್ತಿದೆ.

ಮಂಗಳೂರಿನ ಎರಡು ಕಾಲೇಜುಗಳಲ್ಲಿ ನಡೆದ ಹಿಜಾಬ್‌ ಗಲಾಟೆಗೆ ಸಂಬಂಧಿಸಿದಂತೆ ಎರಡೂ ಕಾಲೇಜುಗಳಿಗೆ ಅನಿರ್ಧಿಷ್ಟಾವಧಿಯ ರಜೆ ಘೋಷಿಸಲಾಗಿದೆ. ಕಾರ್ ಸ್ಟ್ರೀಟ್​ನಲ್ಲಿರುವ ಡಾ. ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಅನಿರ್ದಿಷ್ಟಾವಧಿ ರಜೆಯನ್ನು ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಈ ಕಾಲೇಜುಗಳಲ್ಲಿ ಪರೀಕ್ಷೆ ನಡೆಯುತ್ತಿತ್ತು. ಆದರೆ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಸದ್ಯ ಮುಂದಿನ ಆದೇಶವರೆಗೆ ಆನ್‌ಲೈನ್ ಮೂಲಕ ತರಗತಿ ನಡೆಸಲಾಗುವುದು ಎಂದು ವಿದ್ಯಾರ್ಥಿಗಳಿಗೆ ಹೇಳಲಾಗಿದೆ.

ಇದಕ್ಕೆ ಕಾರಣ ಕಳೆದ ಮೂರು ದಿನಗಳಿಂದ ಆಗುತ್ತಿರುವ ಹಿಜಾಬ್ ಗಲಾಟೆ. ಹೈಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಹಿಜಾಬ್‌ ಧರಿಸಿ ತರಗತಿಗೆ ಬರುತ್ತಿರುವ ವಿದ್ಯಾರ್ಥಿನಿಯರಿಗೆ ಪ್ರವೇಶವನ್ನು ತಡೆಯಲಾಗಿದೆ. ಈ ವೇಳೆ ಕಾಲೇಜು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಮಧ್ಯೆ ವಾಗ್ವಾದ ನಡೆದಿದೆ. ಈ ಕುರಿತು ವಿದ್ಯಾರ್ಥಿನಿಯೊಬ್ಬಳು ಬಂದರ್ ಠಾಣೆಯಲ್ಲಿ ದೂರು ನೀಡಿದ್ದಳು. ಇದರಿಂದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕಾಲೇಜಿನ ವ್ಯವಸ್ಥಾಪಕ ಸಮಿತಿಯು ವಿದ್ಯಾರ್ಥಿಗಳಿಗೆ ಅನಿರ್ದಿಷ್ಟಾವಧಿ ರಜೆ ಘೋಷಿಸಿದೆ. ಒಟ್ಟಿನಲ್ಲಿ ಕಾಣದ ಕೈಗಳಿಂದಾಗಿ ಉಳಿದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವೂ ಅತಂತ್ರವಾಗಿದ್ದು, ಇದು ಪಾಲಕರನ್ನು ಚಿಂತೆಗೀಡು ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net