ಗರಿಷ್ಠ ಎರಡು ಮಕ್ಕಳಿದ್ದರೆ ಮಾತ್ರ ಸೌಲಭ್ಯ: ರಾಜ್ಯದಲ್ಲೂ ನಿಯಮ- ಸಿಟಿ ರವಿ ಸಿಡಿಸಿದರು ಬಾಂಬ್​!

Ravi
Published on

ಬೆಂಗಳೂರು: ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸುವ ಸಲುವಾಗಿ ಉತ್ತರ ಪ್ರದೇಶ ಮತ್ತು ಅಸ್ಸಾಂ ಕೆಲವೊಂದು ನಿಯಮಗಳನ್ನು ಜಾರಿಗೊಳಿಸಿದೆ. ಸರ್ಕಾರಿ ಉದ್ಯೋಗ, ಸಬ್ಸಿಡಿ ಸೌಲಭ್ಯ ಸೇರಿದಂತೆ ಇತರ ಸೌಕರ್ಯಗಳನ್ನು ಪಡೆಯುವುದಿದ್ದರೆ ಗರಿಷ್ಠ ಎರಡು ಮಕ್ಕಳು ಇರಬೇಕು. ಅದಕ್ಕಿಂತ ಹೆಚ್ಚಿಗೆ ಮಕ್ಕಳು ಇದ್ದರೆ ಸೌಲಭ್ಯ ಸಿಗುವುದಿಲ್ಲ ಎಂಬ ಕರಡು ನೀತಿಯನ್ನು ಈ ಸರ್ಕಾರಗಳು ಪ್ರಕಟಿಸಿವೆ.

ಇದು ಚರ್ಚೆಯಾಗುತ್ತಿರುವ ಬೆನ್ನಲ್ಲೇ ಇದೀಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ಬಾಂಬ್​ ಸಿಡಿಸಿದ್ದಾರೆ. ಕರ್ನಾಟಕದಲ್ಲಿಯೂ ಇದೇ ರೀತಿಯ ಕಾನೂನನ್ನು ತರಬೇಕು ಎಂದು ಟ್ವೀಟ್​ ಮಾಡಿದ್ದಾರೆ. ಕರ್ನಾಟಕವು ತನ್ನ ಬೆಳೆಯುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಲು ಅಸ್ಸಾಂ ಮತ್ತು ಉತ್ತರ ಪ್ರದೇಶದ ಮಾದರಿಯಲ್ಲಿ ಹೊಸ ಜನಸಂಖ್ಯಾ ನೀತಿಯನ್ನು ತರಲು ಇದು ಸಕಾಲ. ಸೀಮಿತ ನೈಸರ್ಗಿಕ ಸಂಪನ್ಮೂಲಗಳು ಲಭ್ಯವಿರುವುದರಿಂದ, ಜನಸಂಖ್ಯಾ ಸ್ಫೋಟಸಂಭವಿಸಿದರೆ ಪ್ರತಿಯೊಬ್ಬ ನಾಗರಿಕನ ಅಗತ್ಯಗಳನ್ನು ಪೂರೈಸುವುದು ಕಷ್ಟವಾಗುತ್ತದೆ' ಎಂದು ಅವರು ಹೇಳಿದ್ದಾರೆ.

ಇದೇನಾದರೂ ಜಾರಿಗೊಂಡರೆ ಕರ್ನಾಟಕದಲ್ಲಿಯೂ ಎರಡು ಮಕ್ಕಳ ನೀತಿ ಜಾರಿಯಾಗಲಿದೆ. ಆದರೆ ಸದ್ಯ ಈ ಕುರಿತ ವಿವಾದಕ್ಕೆ ತೆರೆ ಎಳೆದಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಅಂತಹ ಯಾವುದೇ ಪ್ರಸ್ತಾಪ ಸದ್ಯ ಇಲ್ಲ. ಈ ಬಗ್ಗೆ ಚರ್ಚೆ ಮಾಡಬೇಕಾಗುತ್ತದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net