

ಬೆಂಗಳೂರು: ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಐ.ಡಿ.ಹಳ್ಳಿ ಗ್ರಾಮದ ಮಹಿಳೆ ಸಾವಿಗೆ ಆಂಬುಲೆನ್ಸ್ ಸೇವೆ ವ್ಯತ್ಯಯ ಕಾರಣವಲ್ಲ ಎಂದು ಜಿಲ್ಲಾಮಟ್ಟದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ, ಆದರೂ ಸ್ಥಳಕ್ಕೆ ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲಿಸಿ ವರದಿ ನೀಡಲು ಇಲಾಖೆ ನಿರ್ದೇಶಕರಿಗೆ ಸೂಚಿಸಿರುವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಸುದ್ದಿಗಾರರಿಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ವಿಷಯ ಗಮನಕ್ಕೆ ಬರುತ್ತಲೇ ತಾಲೂಕು ,ಜಿಲ್ಲಾಮಟ್ಟದ ಅಧಿಕಾರಿಗಳಿಂದ ಮಾಹಿತಿ ಪಡೆದಿರುವೆ. ಅನಾರೋಗ್ಯದಿಂದ ಬಳಲುತ್ತಿದ್ದ ಜಯಮ್ಮ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲು ಆಂಬುಲೆನ್ಸ್ ಇತ್ತೆಂದು ಹೇಳಿದ್ದಾರೆ. ಇಲಾಖೆ ನಿರ್ದೇಶಕರು ವರದಿ ನೀಡಿದ ಬಳಿಕ ವಾಸ್ತವಾಂಶ ಗೊತ್ತಾಗಲಿದೆ ಎಂದರು.
ಸರ್ವರ್ ಸಮಸ್ಯೆಯಿಂದ ಮೂರು ತಾಸುಗಳವರೆಗೆ ಆಂಬುಲೆನ್ಸ್ ಸೇವೆಯಲ್ಲಿ ವ್ಯತ್ಯಾಸವಾಗಿತ್ತು. ಮಾನವ ಚಾಲಿತ ಬ್ಯಾಕಪ್ ವ್ಯವಸ್ಥೆ ಎಲ್ಲ ಜಿಲ್ಲೆಗಳಲ್ಲಿ ಏರ್ಪಾಟಾಗಿದ್ದು, ಜನರಿಗೆ ತೊಂದರೆಯಾಗದಂತೆ ಪೂರಕ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ಡಾ.ಕೆ.ಸುಧಾಕರ್ ಪುನರುಚ್ಚರಿಸಿದರು.