

ತುಮಕೂರು: ಸರ್... ನನ್ನ ಇನ್ನೋವಾ ಕಾರು...ಸಿಲ್ವರ್ ಬಣ್ಣ... ಸಂಖ್ಯೆ.... ಇದನ್ನು ಕಳುವು ಮಾಡಿಕೊಂಡು ಹೋಗಲಾಗಿದೆ... ಹೀಗೆಂದು ತುಮಕೂರಿನ ದೊಡ್ಡೇಗೌಡ ಎನ್ನುವವರು ಪೊಲೀಸರಲ್ಲಿ ದೂರು ದಾಖಲು ಮಾಡಿದರೆ, ಪೊಲೀಸರು ಗೌಡ್ರನ್ನೇ ಅರೆಸ್ಟ್ ಮಾಡಿರುವ ಘಟನೆ ನಡೆದಿದೆ.
ಆಂಧ್ರದ ಮಡಕಶಿರಾ ಮೂಲದ ದೊಡ್ಡೇಗೌಡರು ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಮಿಡಿಗೇಶಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದಾರೆ.
ಮಿಡಿಗೇಶಿ ಠಾಣೆಯಲ್ಲಿ ದೂರು ದಾಖಲಿಸಿದ್ದ ದೊಡ್ಡೇಗೌಡರು, ಮಧುಗಿರಿ ಪಾವಗಡ ರಸ್ತೆಯ ನೀಲಿಹಳ್ಳಿ ರಸ್ತೆ ಬಳಿ ಮೂರು ಜನ ದುಷ್ಕರ್ಮಿಗಳು ಬಂದು ನನ್ನ ಇನ್ನೊವಾ ಕಾರು ಪಂಚರ್ ಆಗಿದೆ ಎಂದು ಕಾರು ಅಡ್ಡಗಟ್ಟಿ ನಿಲ್ಲಿಸಿದ್ದರು.
ನಾನು ಕಾರು ನಿಲ್ಲಿಸಿದಾಗ ನನ್ನ ಮೇಲೆ ತೀವ್ರ ಸ್ವರೂಪದಲ್ಲಿ ಹಲ್ಲೆ ನಡೆಸಿ ಕಾರು ಅಪಹರಿಸಿದ್ದಾರೆ ಎಂದು ತಿಳಿಸಿದ್ದರು.
ಇವರು ಕೊಟ್ಟ ದೂರಿನ ಅನ್ವಯ ಪೊಲೀಸರು ತನಿಖೆ ಕೈಗೊಂಡಾಗ ಹಾಗೂ ದೊಡ್ಡೇಗೌಡರ ಚಲನವಲನ ಗಮನಿಸಿದಾಗ ಪೊಲೀಸರಿಗೆ ಇವರ ಮೇಲೇ ದೌಟು ಶುರುವಾಗಿದೆ. ನಂತರ ಪ್ರಕರಣದ ಆಳಕ್ಕೆ ಹೋದಾಗ ಪೊಲೀಸರಿಗೆ ತಿಳಿದದ್ದು ಏನೆಂದರೆ, ಕಾರು ಇದ್ದದ್ದು ನಿಜ, ಆದರೆ ಅದು ಕಳುವಾಗಲಿಲ್ಲ, ಗೌಡ್ರ ಆಂಧ್ರದ ರಂಗಾಪುರದಲ್ಲಿರುವ ಸಂಬಂಧಿಕರ ಮನೆಯಲ್ಲಿ ಸೇಫ್ ಆಗಿದೆ. ಇದೊಂದು ಸುಳ್ಳು ದೂರು ಎಂದು ತಿಳಿದಿದೆ.
ಈ ಬಗ್ಗೆ ದೊಡ್ಡೇಗೌಡರ ಬಾಯಿ ಬಿಡಿಸಿದಾಗ ಅವರು ಸತ್ಯ ಒಪ್ಪಿಕೊಂಡಿದ್ದಾರೆ. ಕಾರನ್ನು ಸಾಲ ಮಾಡಿ ತೆಗೆದುಕೊಂಡಿದ್ದೇನೆ. ಗೋಲ್ಡ್ ಲೋನ್ ನೀಡುವ ಸಂಸ್ಥೆಯಿಂದ 12 ಲಕ್ಷಸಾಲ ಮಾಡಿಕೊಂಡಿದ್ದೇನೆ. ಕಂತು ಕಟ್ಟಲಾಗಲಿಲ್ಲ. ಆದ್ದರಿಂದ ಕಾರು ಕಳುವಾಗಿದೆ ಎಂದು ದೂರು ಕೊಟ್ಟರೆ ಇನ್ಶುರೆನ್ಸ್ ಸಿಗುತ್ತದೆ ಎಂದು ಈ ರೀತಿ ದೂರು ಕೊಟ್ಟೆ. ಸಂಬಂಧಿ ಮನೆಯಲ್ಲಿ ಇಟ್ಟುಬಂದಿದ್ದೆ ಕಾರು ಎಂದಿದ್ದಾರೆ.
ಸದ್ಯ ಗೌಡ್ರನ್ನು ಅರೆಸ್ಟ್ ಮಾಡಿರುವ ಪೊಲೀಸರು ಕೇಸ್ ದಾಖಲು ಮಾಡಿದ್ದಾರೆ.