

ಚಿತ್ರದುರ್ಗ: ಒಂದು ಹಂದಿಗಾಗಿ ಮೂವರ ಹೆಣ ಉರುಳಿ ಒಬ್ಬನ ರುಂಡ ನಾಪತ್ತೆಯಾಗಿರುವ ಭಯಾನಕ ಘಟನೆ ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ನಡೆದಿದೆ.
ಮಾರೇಶ (50), ಯಲ್ಲೇಶ (30), ಸೀನಪ್ಪ (30) ಮೃತಪಟ್ಟವರು. ಇವರಲ್ಲಿ ಮಾರೇಶ್ ಮತ್ತು ಯಲ್ಲೇಶ ಅಪ್ಪ-ಮಗನಾಗಿದ್ದು, ಸೀನಪ್ಪ ಅಣ್ಣನ ಮಗನಾಗಿದ್ದಾನೆ. ಹಂದಿ ಸಾಕಣೆ ಮಾಡುವ ಗುಂಪಿನ ನಡುವೆ ಮಾರಾಮಾರಿ ನಡೆದಿರುವುದು ಈ ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಏಕೆಂದರೆ, ಹತ್ಯೆಗೀಡಾದವರು ಹಂದಿ ಸಾಕಣೆ ಮಾಡಿಕೊಂಡಿದ್ದವರು ಎಂದು ತಿಳಿದುಬಂದಿದೆ.
ಹಂದಿ ಕದಿಯಲು ಬಂದಿದ್ದ ಕಳ್ಳರು ಈ ಮೂವರನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಆದರೆ ಇವರ ಪೈಕಿ ಓರ್ವ ಮೃತನ ರುಂಡವನ್ನೂ ದುಷ್ಕರ್ಮಿಗಳು ಚೆಂಡಾಡಿದ್ದು ರುಂಡಕ್ಕಾಗಿ ಇದೀಗ ಶೋಧ ಕಾರ್ಯ ನಡೆದಿದೆ.
ಮಂಗಳವಾರ ತಡರಾತ್ರಿ ದುಷ್ಕರ್ಮಿಗಳ ಗುಂಪೊಂದು ನಾಯಕನಹಟ್ಟಿ ಹೊರವಲಯದಲ್ಲಿರುವ ಹಂದಿ ಸಾಕಣೆ ಗುಡಿಸಲಿಗೆ ಏಕಾಏಕಿ ನುಗ್ಗಿದ್ದಾರೆ. ನಂತರ ಗುಡಿಸಲಿನ ಬಳಿ ಮಲಗಿದ್ದ ಮಾರೇಶನ ತಲೆ ಕಡಿದು ಕೊಲೆಗೈದಿದ್ದಾರೆ. ತಲೆ ಇಲ್ಲದ ದೇಹ ಮಾತ್ರ ಸ್ಥಳದಲ್ಲಿ ಪತ್ತೆಯಾಗಿದ್ದು, ಶಿರ ನಾಪತ್ತೆಯಾಗಿದೆ.
ದುಷ್ಕರ್ಮಿಗಳಿಂದ ತಪ್ಪಿಸಿಕೊಳ್ಳಲು ಯಲ್ಲೇಶ್ ಗುಡಿಸಲಿನಿಂದ ದೂರ ಓಡಿಹೋಗಿದ್ದಾನೆ. ಆಗ ರಸ್ತೆ ಬದಿಯಲ್ಲೇ ಆತನನ್ನು ಕಲ್ಲಿನಿಂದ ಹೊಡೆದು ಕೊಂದಿದ್ದಾರೆ.
ಮೂವರನ್ನು ಕೊಂದ ಬಳಿಕ 40ಕ್ಕೂ ಹೆಚ್ಚು ಹಂದಿಗಳನ್ನು ಕದ್ದು ಪರಾರಿಯಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ವಾರದ ಹಿಂದೆ ನಾಯಕನಹಟ್ಟಿಗೆ ಬುಲೇರೊ ವಾಹನದಲ್ಲಿ ಬಂದಿದ್ದ ಆಂಧ್ರ ಮೂಲದ ಗುಂಪೊಂದು ನಿಮಗೆ ಪಾಠ ಕಲಿಸುವುದಾಗಿ ಎಚ್ಚರಿಕೆ ಕೊಟ್ಟು ತೆರಳಿದ್ದರು. ಈ ಹಿನ್ನೆಲೆಯಲ್ಲಿ ಹಂದಿ ವ್ಯಾಪಾರದ ವಿಚಾರದಲ್ಲಿ ಪರಸ್ಪರ ದ್ವೇಷವಿರಬಹುದೆಂಬ ಶಂಕೆ ನಾಯಕನಹಟ್ಟಿಯಲ್ಲಿ ವ್ಯಕ್ತವಾಗಿದೆ.
ಖಾರದ ಪುಡಿ ಎರಚಿ ಕೊಲೆ ಮಾಡಿರುವ ಕುರುಹು ಪತ್ತೆಯಾಗಿದೆ. ಸೀನಪ್ಪ ಹಾಗೂ ಅಣ್ಣನ ಮಗನಾದ ಯಲ್ಲೇಶನ ಕಣ್ಣಿಗಳಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರ ಹಾಗೂ ಕಲ್ಲಿನಿಂದ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ. ನಾಯಕನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.