ಡಿಸಿಎಂ ಹುದ್ದೆಗೆ ಬೀಳುತ್ತಾ ಕತ್ತರಿ? ನೂತನ ಸಚಿವರಾರು? ಇಂದು ಸಿಗಲಿದೆ ಉತ್ತರ- ಎಲ್ಲರ ಚಿತ್ತ ರಾಜಭವನದತ್ತ

bommai
Published on

ಬೆಂಗಳೂರು: ಕೆಲ ದಿನಗಳಿಂದ ಭಾರಿ ಕೋಲಾಹಲ ಸೃಷ್ಟಿಸಿರುವ ಸಚಿವ ಸಂಪುಟದ ವಿಸ್ತರಣೆ ಕುರಿತಂತೆ ಇರುವ ಕುತೂಹಲಕ್ಕೆ ಇಂದು ಮಧ್ಯಾಹ್ನ 2.15ಕ್ಕೆ ತೆರೆ ಬೀಳಲಿದೆ. ಇದುವರೆಗೂ ಸಚಿವರು ಯಾರ್ಯಾರು ಎಂಬ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ಸಂಭಾವ್ಯರ ಪಟ್ಟಿ ಮಾತ್ರ ಎಲ್ಲೆಡೆ ಹರಿದಾಡುತ್ತಿದ್ದು, ಎಲ್ಲರ ಚಿತ್ತವೂ ರಾಜಭವನದತ್ತ ನೆಟ್ಟಿದೆ.

ಇದೇ ವೇಳೆ ಉಪ ಮುಖ್ಯಮಂತ್ರಿ ಸ್ಥಾನ ಈ ಬಾರಿ ಹೆಚ್ಚಾಗಲಿದೆ, 3-4 ಮಂದಿ ಡಿಸಿಎಂ ಆಗಲಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಹರಿದಾಡುತ್ತಿತ್ತು. ಆದರೆ ಇದೀಗ ಬಂದಿರುವ ಮಾಹಿತಿಯ ಪ್ರಕಾರ ಉಪಮುಖ್ಯಮಂತ್ರಿಗಳ ಸ್ಥಾನಕ್ಕೆ ಕತ್ತರಿ ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಈ ಕುರಿತು ಮುಖ್ಯಮಂತ್ರಿ ಎಸ್‌.ಆರ್‌.ಬೊಮ್ಮಾಯಿಯವರು ಸ್ಪಷ್ಟ ಮಾಹಿತಿ ನೀಡದಿದ್ದರೂ, ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡುವ ವೇಳೆ ಅವರು, ಡಿಸಿಎಂ ಹುದ್ದೆಗೆ ಸಂಬಂಧಿಸಿದಂತೆ ಹೈಕಮಾಂಡ್‌ ತೀರ್ಮಾನ ಮಾಡುತ್ತದೆ. ಈ ಬಗ್ಗೆ ಇನ್ನೂ ಚರ್ಚೆಯಾಗಿಲ್ಲ ಎಂದಿದ್ದಾರೆ.

ಆದರೆ ಬಲ್ಲ ಮೂಲಗಳ ಪ್ರಕಾರ, ಉಪಮುಖ್ಯಮಂತ್ರಿ ಸ್ಥಾನಕ್ಕೆ ಇದಾಗಲೇ ಹೆಚ್ಚು ಮಂದಿ ಆಕಾಂಕ್ಷಿಗಳು ಇರುವ ಕಾರಣ, ಅನಗತ್ಯ ಕಿರಿಕಿರಿಯಾಗುತ್ತದೆ, ಈ ಹುದ್ದೆಗೆ ಲಾಬಿ ಹೆಚ್ಚು ಆಗುತ್ತದೆ. ಆದ್ದರಿಂದ ಸದ್ಯ ಈ ಹುದ್ದೆ ಬೇಡ. ಒಂದು ವೇಳೆ ಬೇಕೇ ಬೇಕು ಎಂದಾದರೆ ಸಚಿವ ಸಂಪುಟ ರಚನೆಯಾದ ಬಳಿಕ ತೀರ್ಮಾನಿಸಬಹುದು ಎಂದು ವರಿಷ್ಠರು ಸಲಹೆ ಕೊಟ್ಟಿರುವುದಾಗಿ ತಿಳಿದುಬಂದಿದೆ.

ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರ ಬಿ.ವೈ, ವಿಜಯೇಂದ್ರ ಅವರಿಗೂ ಮಂತ್ರಿಸ್ಥಾನ ಸಿಗಲಿದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಎಲ್ಲಾ ಪ್ರಶ್ನೆಗಳು ಸದ್ಯ ಪ್ರಶ್ನೆಗಳಾಗಿಯೇ ಉಳಿದಿದ್ದು, ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ.

ಸದ್ಯ ರಾಜಕೀಯ ವಲಯದಲ್ಲಿ ಹರಿದಾಡುತ್ತಿರುವ ಸಂಭವನೀಯ ಸಚಿವರ ಪಟ್ಟಿಯಲ್ಲಿ ಇರುವವರು:

ಎಂ.ಪಿ. ರೇಣುಕಾಚಾರ್ಯ ಅಥವಾ ಮಾಡಾಳ್ ವಿರುಪಾಕ್ಷಪ್ಪ; ಗೋವಿಂದ ಕಾರಜೋಳ ಅಥವಾ ಅರವಿಂದ ಲಿಂಬಾವಳಿ; ಪ್ರಭು ಚವ್ಹಾಣ್; ಬಾಲಚಂದ್ರ ಜಾರಕಿಹೊಳಿ; ಶಂಕರಗೌಡ ಪಾಟೀಲ್ ಮುನೇನಕೊಪ್ಪ; ತಿಪ್ಪಾರೆಡ್ಡಿ ಅಥವಾ ಪೂರ್ಣಿಮಾ ಶ್ರೀನಿವಾಸ್; ಬೈರತಿ ಬಸವರಾಜ್; ದತ್ತಾತ್ರೇಯ ಪಾಟೀಲ್ ರೇವೂರ; ಸುನೀಲ್ ಕುಮಾರ್; ಆರಗ ಜ್ಞಾನೇಂದ್ರ; ಎಸ್.ಟಿ. ಸೋಮಶೆಖರ್; ಬಿ. ಶ್ರೀರಾಮುಲು; ಶಿವರಾಮ ಹೆಬ್ಬಾರ್ ಅಥವಾ ರೂಪಾಲಿ ನಾಯಕ್; ರಾಜೂಗೌಡ; ಎಸ್. ಅಂಗಾರ; ಅಪ್ಪಚ್ಚು ರಂಜನ್; ರಾಮದಾಸ್; ಹಾಲಪ್ಪ ಆಚಾರ್; ಅಭಯ ಪಾಟೀಲ್; ಡಾ. ಸಿ.ಎನ್. ಅಶ್ವತ್ಥನಾರಾಯಣ ಅಥವಾ ಆರ್ ಅಶೋಕ್; ಬಿ.ಸಿ. ನಾಗೇಶ್/ಮಾಧುಸ್ವಾಮಿ; ಸಿ.ಪಿ. ಯೋಗೇಶ್ವರ್; ಎಂ.ಟಿ.ಬಿ. ನಾಗರಾಜ್; ರವಿಕುಮಾರ್; ಆನಂದಸಿಂಗ್; ಬಿ.ಸಿ. ಪಾಟೀಲ್; ಕೆ.ಸಿ. ನಾರಾಯಣಗೌಡ; ಡಾ. ಸುಧಾಕರ್; ಆರ್. ಶಂಕರ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net