

ಶಿವಮೊಗ್ಗ: ಬೆಂಗಳೂರು-ತಾಳಗುಪ್ಪ ಎಕ್ಸ್ಪ್ರೆಸ್ ರೈಲು ಶಿವಮೊಗ್ಗ ಜಿಲ್ಲೆಯ ಸೂಡೂರು ಬಳಿ ಹಳಿ ತಪ್ಪಿರುವ ಘಟನೆ ನಿನ್ನೆ ಡಿ.31ರ ರಾತ್ರಿ ಸುಮಾರು 9 ಗಂಟೆಗೆ ನಡೆದಿದೆ.
ಈ ರೈಲು ನಿನ್ನೆ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಿಂದ ತಾಳಗುಪ್ಪಕ್ಕೆ ಹೊರಟಿತ್ತು. ಕುಂಸಿಯಿಂದ ಸ್ವಲ್ಪ ದೂರವಿರುವ ಸೂಡೂರು ಹತ್ತಿರ ರೈಲು ಹಳಿತಪ್ಪಿದೆ. ಚಾಲಕನ ಸಮಯಪ್ರಜ್ಞೆಯಿಂದ ಯಾವುದೇ ಪ್ರಾಣಾಪಾಯವಾಗಿಲ್ಲ.
ನಿನ್ನೆ ಸಂಜೆಯಷ್ಟೆ ಹೊಸದಾಗಿ ಹಳಿ ಪಕ್ಕದಲ್ಲಿ ಜಲ್ಲಿ ಹಾಕಲಾಗಿತ್ತು. ಅದು ಹಳಿಯ ಮೇಲೆ ಬಿದ್ದು ರೈಲು ಇಂಜಿನ್ನ ಮುಂದಿನ ಎರಡು ಚಕ್ರವು ಹಳಿ ತಪ್ಪಿದೆ ಎಂದು ತಿಳಿದುಬಂದಿದೆ.
ಘಟನೆ ಸಂಭವಿಸಿದ ಕೂಡಲೇ ಇಂಜಿನಿಯರಿಂಗ್ ಸ್ಟಾಫ್, ಡಾಕ್ಟರ್ಸ್ ಸ್ಟಾಫ್ಗಳನ್ನು ಕರೆಸಿ ತ್ವರಿತ ಕಾರ್ಯ ನಡೆಸಲಾಗಿದೆ. ಇದರಿಂದಾಗಿ ಕೆಲ ಸಮಯ ಸಂಚಾರ ಅಸ್ತವ್ಯಸ್ತವಾಗಿದ್ದರಿಂದ ರಾತ್ರಿ 10.30ರ ವೇಳೆಗೆ ತಾಳಗುಪ್ಪದಿಂದ ಬೆಂಗಳೂರಿಗೆ ತೆರಳಲು ಇದ್ದ ರೈಲು ರದ್ದಾಯಿತು.
ಪ್ರಯಾಣಿಕರೇ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಊರುಗಳಿಗೆ ತೆರಳಿದ್ದಾರೆ ಎನ್ನಲಾಗಿದೆ.