ಕಿನ್ನರ ಗ್ರಾಪಂನ ಎಸ್​ಟಿ ಸದಸ್ಯ ಸ್ಥಾನ ಖಾಲಿ!

5KWR2
Published on

ಕಾರವಾರ: ಗ್ರಾಪಂ ಚುನಾವಣೆಗೆ ಸ್ಪರ್ಧಿಸಲು ನಾ ಮುಂದು, ತಾ ಮುಂದು ಎಂದಿರುತ್ತಾರೆ. ಆದರೆ, ಕಾರವಾರದ ಕಿನ್ನರ ಗ್ರಾಪಂನ ಒಂದು ಸ್ಥಾನಕ್ಕೆ ಮಾತ್ರ ಸ್ಪರ್ಧಿಯೇ ಇರುವುದಿಲ್ಲ. ಈಗಲ್ಲ ಕಳೆದ ಹತ್ತಾರು ವರ್ಷಗಳಿಂದ ಇಲ್ಲಿನ ಒಂದು ಸ್ಥಾನ ಖಾಲಿಯೇ ಇದೆ.

ಕಿನ್ನರದಲ್ಲಿ ಒಟ್ಟು 27 ಮಜರೆಗಳಿದ್ದು, 850 ಕುಟುಂಬಗಳಿವೆ. 3,214 ಜನಸಂಖ್ಯೆ ಇದೆ. ಗ್ರಾಪಂನಲ್ಲಿ 4 ವಾರ್ಡ್​ಗಳಿದ್ದು, 8 ಸದಸ್ಯ ಸ್ಥಾನದ ಬಲವಿದೆ. ಆದರೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯಾವುದೇ ಕುಟುಂಬಗಳಿಲ್ಲ. ಗ್ರಾಪಂನ ಒಟ್ಟಾರೆ ಸದಸ್ಯ ಬಲಕ್ಕನುಗುಣವಾಗಿ ಜಿಲ್ಲಾಡಳಿತ ಮೀಸಲಾತಿ ನಿಗದಿ ಮಾಡುತ್ತದೆ. ಎಷ್ಟೇ ಕಡಿಮೆ ಸ್ಥಾನ ಇದ್ದರೂ ಪ್ರತಿ ಗ್ರಾಪಂನಲ್ಲಿ ಒಂದು ಸ್ಥಾನವನ್ನು ಪರಿಶಿಷ್ಟ ಜಾತಿಗೆ, ಇನ್ನೊಂದು ಸ್ಥಾನವನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲಿಡುವುದು ಕಡ್ಡಾಯ. ಆದರೆ, ಕಿನ್ನರಕ್ಕೆ ಇದೇ ಸಮಸ್ಯೆಯಾಗಿಬಿಟ್ಟಿದೆ. ಹೊರಗಿನವರು ಬಂದು ಇಲ್ಲಿ ಸ್ಪರ್ಧೆ ಮಾಡಲು ಸಾಧ್ಯವಿಲ್ಲ. ಎರಡೂ ಮೀಸಲು ಸ್ಥಾನಗಳಿಗೆ ಎಷ್ಟೇ ಬಾರಿ ಚುನಾವಣೆ ನಡೆದರೂ ಯಾರೂ ಸ್ಪರ್ಧಿಗಳೇ ಸಿಗುತ್ತಿರಲಿಲ್ಲ. ಕಳೆದ ಗ್ರಾಪಂ ಚುನಾವಣೆಯ ಪೂರ್ವದಲ್ಲಿ ಗ್ರಾಮದ ಒಬ್ಬ ವ್ಯಕ್ತಿ ಅಂತರ್ಜಾತಿಯ ವಿವಾಹವಾಗಿದ್ದರು. ನಂತರ ಪರಿಶಿಷ್ಟ ಜಾತಿಯ ಒಂದು ಸ್ಥಾನ ಭರ್ತಿಯಾಗಿದೆ. ಆದರೆ, ಪರಿಶಿಷ್ಟ ಪಂಗಡಕ್ಕೆ ಮೀಸಲಿರುವ ಸ್ಥಾನ ಇನ್ನೂ ಖಾಲಿಯೇ ಉಳಿದಿದೆ. ಈ ಮೊದಲು ಬೋರಿಬಾಗ ವಾರ್ಡ್​ಗೆ ಎಸ್​ಟಿ ಮೀಸಲಾತಿ ಬಂದಿತ್ತು. ಈಗ ಘಾಡಸಾಯಿ ವಾರ್ಡ್​ಗೆ ಎಸ್​ಟಿ ಮೀಸಲಾತಿ ಬಂದಿದ್ದು. ಅದು ಖಾಲಿ ಉಳಿಯುವುದು ಖಚಿತವಾಗಿದೆ.

ಅನುದಾನವೂ ವಾಪಸ್: ಸರ್ಕಾರದ ಕಡ್ಡಾಯ ನಿಯಮದಂತೆ ಸರ್ಕಾರದಿಂದ ಬರುವ ಎಲ್ಲ ಅನುದಾನದಲ್ಲಿ ಶೇ. 22.75 ರಷ್ಟು ಅನುದಾನವನ್ನು ಎಸ್​ಸಿ ಮತ್ತು ಎಸ್​ಟಿ ಸಮುದಾಯಕ್ಕೆ ಮೀಸಲಿಡಬೇಕು. ಆದರೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ಒಂದೂ ಕುಟುಂಬ ಇಲ್ಲದ ಕಾರಣ ಲಕ್ಷಾಂತರ ರೂ. ಮೀಸಲು ಅನುದಾನವನ್ನು ಗ್ರಾಪಂನಿಂದ ಸರ್ಕಾರಕ್ಕೆ ವಾಪಸ್ ಕಳುಹಿಸಲಾಗುತ್ತದೆ. ನಾವು ಪ್ರತಿ ಬಾರಿಯೂ ನಿರ್ದೇಶನ ಕೋರಿ ತಾಪಂ ಇಒ ಹಾಗೂ ಜಿಪಂ ಸಿಇಒ ಅವರಿಗೆ ಪತ್ರ ಬರೆಯುತ್ತೇವೆ ಎನ್ನುತ್ತಾರೆ ಗ್ರಾಪಂ ಪಿಡಿಒ ಮಧುರಾ ನಾಯ್ಕ.

ಕೆಲ ವರ್ಷಗಳಿಂದ ಕಿನ್ನರ ಗ್ರಾಪಂನ ಒಂದು ಸ್ಥಾನ ಖಾಲಿ ಇದೆ. ಇದರಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ. ಇಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಯಾವುದೇ ಕುಟುಂಬ ಇಲ್ಲದ ಕಾರಣ ಆ ಸ್ಥಾನವನ್ನು ಬೇರೆ ಮೀಸಲಾತಿಗೆ ವರ್ಗಾವಣೆ ಮಾಡಿ ಕೊಡಬೇಕು. | ಸಂದೀಪ ಶೆಟ್ಟಿ, ಕಿನ್ನರ ಗ್ರಾಮಸ್ಥ

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಕನಿಷ್ಠ ತಲಾ ಒಂದು ಸ್ಥಾನವನ್ನು ಮೀಸಲಿಡುವುದು ಕಡ್ಡಾಯ. ಅದನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. | ರಾಮಚಂದ್ರ ಕಟ್ಟಿ, ತಹಸೀಲ್ದಾರ್ ಕಾರವಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net