

ಚಾಮರಾಜನಗರ: ಶಿಕ್ಷಣಕೋಸ್ಕರ ಎರಡು ಚಾನೆಲ್ಗಳು ಮೀಸಲಾಗಿದ್ದು, ಕೇಬಲ್ ಆಪರೇಟರ್ಗಳ ಜತೆ ಚರ್ಚೆ ಮಾಡಿ ಪ್ರಸಾರಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು 8 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಚಂದನ ವಾಹಿನಿ ಮೂಲಕ ಸೇತುಬಂಧ ಕಾರ್ಯಕ್ರಮ ನಡೆಯಲಿದೆ. 1ರಿಂದ 10 ನೇ ತರಗತಿಯವರಗಿನ ಮಕ್ಕಳಿಗೆ ಧ್ವನಿಮುದ್ರಿತ ಪಾಠ ಸಿದ್ಧವಿದ್ದು, ಶಿಕ್ಷಣ ಇಲಾಖೆಯ ಎರಡು ಚಾನೆಲ್ಗಳ ಮೂಲಕ ಪ್ರಸಾರ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ರೆಗ್ಯುಲರ್ ಶಿಕ್ಷಣಕ್ಕೆ ಪೂರಕವಾಗಿ ಚಾನೆಲ್ಗಳ ಮೂಲಕ ಪಾಠ ಮಾಡಲಾಗುವುದು. ಕೇಬಲ್ ಆಪರೇಟರ್ಗಳೊಂದಿಗೆ ಮಾತುಕತೆ ನಡೆಸಿ ಈ ಚಾನೆಲ್ಗಳ ಪ್ರಸಾರಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು. ಚಾನೆಲ್ ಪ್ರಸಾರ ಮಾಡುವ ಆಪರೇಟರ್ಗಳಿಗೆ ಹಣ ಪಾವತಿಸಲಾಗುವುದು ಎಂದರು.
ಶಿಕ್ಷಣ ಇಲಾಖೆ ಕೊಟ್ಟಿರುವುದು ನನಗೆ ಸಮಾಧಾನ ತಂದಿದೆ. ಇಲಾಖೆಯ ಋಣ ತೀರಿಸುವ ಸಮಯ ಬಂದಿದೆ. ನನ್ನ ತಾಯಿ ಶಿಕ್ಷಕಿಯಾಗಿ ಕೆಲಸ ಮಾಡಿದ್ದಾರೆ. ಶಿಕ್ಷಕರ ಕಡ್ಡಾಯ ವರ್ಗಾವಣೆ ಬಗ್ಗೆ ಸಾಕಷ್ಟು ಗೊಂದಲಗಳಿತ್ತು. ಎಲ್ಲರ ಸಲಹೆ ಅಭಿಪ್ರಾಯಗಳನ್ನು ಪಡೆದು ಶಿಕ್ಷಣ ಸ್ನೇಹಿ ವರ್ಗಾವಣೆ ಕಾಯ್ದೆಯನ್ನು ತಂದಿದ್ದೇವೆ. ವಿಧಾನಸಭೆ ಮತ್ತು ಪರಿಷತ್ನಲ್ಲಿ ಎಲ್ಲರು ಅನುಮೋದನೆ ಕೊಟ್ಟಿದ್ದಾರೆ. ಈಗಾಗಲೇ ನಿಯಮಗಳನ್ನ ಜಾರಿಗೆ ತಂದಿದ್ದೇವೆ. ಬಹಳ ವರ್ಷಗಳಿಂದ ಆಗಬೇಕಾದ ಕೆಲಸವನ್ನು ಮಾಡಿದ್ದೇನೆ. ಶಾಲೆಗಳಲ್ಲಿ ವಾಸ್ತವ್ಯ ಹೂಡಿ ಸಂವಾದ ಮಾಡುವ ಹೊಸ ಕಾರ್ಯಕ್ರಮ ಮಾಡಿದ್ದೇನೆ ಎಂದು ಚಾಮರಾಜನಗರದಲ್ಲಿ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಹೇಳಿದರು.