ಶಿಕ್ಷಕನ ತಲೆಗೆ ಕಸದ ಬುಟ್ಟಿ ಹಾಕಿ ವಿದ್ಯಾರ್ಥಿಗಳ ಪುಂಡತನ: ಚನ್ನಗಿರಿಯಲ್ಲಿ ಆಘಾತಕಾರಿ ಘಟನೆ- ಭಾರಿ ಆಕ್ರೋಶ

1200649
Published on

ದಾವಣಗೆರೆ: ಶಿಕ್ಷಕರ ಮೇಲೆ ವಿದ್ಯಾರ್ಥಿಗಳು ಹಲ್ಲೆ ಮಾಡಿ ತಲೆಗೆ ಕಸದ ಬುಟ್ಟಿ ಹಾಕಿ ಕುಚೇಷ್ಠೆ ಮಾಡಿರುವ ಆಘಾತಕಾರಿ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ನಲ್ಲೂರಿನ ಹೈಸ್ಕೂಲ್‌ನಲ್ಲಿ ನಡೆದಿದೆ.

ನಲ್ಲೂರಿನ ಸರ್ಕಾರಿ ಜೂನಿಯರ್ ಕಾಲೇಜಿನ ಹೈಸ್ಕೂಲ್ ವಿಭಾಗದಲ್ಲಿ ಹಿಂದಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಕಾಶ್ ಬೋಗಾರ್‌ ಅವರ ಮೇಲೆ ವಿದ್ಯಾರ್ಥಿಗಳು ಹಲ್ಲೆ ನಡೆಸಿ ವಿಕೃತಿ ಪ್ರದರ್ಶಿಸಿದ್ದಾರೆ. ಪ್ರಕಾಶ್‌ ಅವರು ಪಾಠ ಮಾಡಲೆಂದು ತರಗತಿಗೆ ಬಂದ ಸಮಯದಲ್ಲಿ ನಾಲ್ಕೈದು ವಿದ್ಯಾರ್ಥಿಗಳು ತಲೆಯ ಮೇಲೆ ಕಸದ ಬುಟ್ಟಿ ಹಾಕಿ ಪುಂಡತನ ತೋರಿಸಿದ್ದಾರೆ. ಇದನ್ನು ಅಲ್ಲಿದ್ದ ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಗುರುವನ್ನು ಬ್ರಹ್ಮ, ವಿಷ್ಣು,ಮಹೇಶ್ವರರಿಗೆ ಹೋಲಿಸುವಂಥ ಈ ಸಂದರ್ಭದಲ್ಲ ವಿದ್ಯಾರ್ಥಿಗಳು ಇಂಥದ್ದೊಂದು ಹೀನ ಕೃತ್ಯಕ್ಕೆ ಕೈಹಾಕಿರುವುದರ ಕುರಿತಂತೆ ಭಾರಿ ಆಕ್ರೋಶ ಉಂಟಾಗಿದೆ.

ಈ ವಿಡಿಯೋ ನೋಡಿದ ಸಾರ್ವಜನಿಕರು ವಿದ್ಯಾರ್ಥಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕೂಡಲೇ ಇವರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾರೆ. ಕೂಡಲೇ ಶಾಸಕ ಮಾಡಾಳು ವಿರೂಪಾಕ್ಷಪ್ಪ ಶಾಲೆಗೆ ಭೇಟಿ ನೀಡಿದ್ದರು. ಡಿಡಿಪಿಐ ಆಗಮಿಸಿ ಘಟನೆಯ ಮಾಹಿತಿ ಪಡೆದುಕೊಂಡರು. ಈ ಕುರಿತು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಪ್ರತಿಕ್ರಿಯೆ ನೀಡಿದ್ದು, ವಿದ್ಯಾರ್ಥಿಗಳು ಮಾಡಿರುವ ಕುಚೇಷ್ಠೆ ನನ್ನ ಗಮನಕ್ಕೆ ಬಂದಿದೆ. ಯಾರೇ ತಪ್ಪು ಮಾಡಿದ್ದರೂ ಕ್ರಮ ತೆಗೆದುಕೊಳ್ಳುತ್ತೇವೆ. ಶಿಕ್ಷಕರ ಕಡೆಯಿಂದ ತಪ್ಪಿದ್ದರೂ ಸಹ ಕ್ರಮ ಆಗುತ್ತದೆ. ವಿದ್ಯಾರ್ಥಿಗಳು ಈ ರೀತಿಯಾದ ಅವಮಾನ ಮಾಡಿರುವುದಕ್ಕೆ ಕಾರಣವೇನು ಎಂಬ ಬಗ್ಗೆ ವರದಿ ನೀಡುವಂತೆ ದಾವಣಗೆರೆ ಡಿಡಿಪಿಐಗೆ ಸೂಚನೆ ನೀಡಲಾಗುವುದು ಎಂದಿದ್ದಾರೆ.

ಪ್ರಕಾಶ್ ಬೋಗಾರ್ ಅತ್ಯಂತ ಸರಳ, ಸೌಮ್ಯ ಸ್ವಭಾವದ ಶಿಕ್ಷಕರು. ದೂರು ಕೊಟ್ಟರೆ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತದೆ ಎಂದುಕೊಂಡು ಸುಮ್ಮನಾಗಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net