

ಬೆಳಗಾವಿ: ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್) ಕಾರ್ಯಕರ್ತರು ಕೆಲ ದಿನಗಳಿಂದ ಕನ್ನಡದ ವಿರುದ್ಧ ಹಲವಾರು ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಮಹಾರಾಷ್ಟ್ರದ ಪರವಾಗಿ ಘೋಷಣೆ ಕೂಗುತ್ತಾ ಕರ್ನಾಟಕದ ವಿರುದ್ಧ ಹೇಳಿಕೆ ನೀಡುತ್ತಿರುವ ಕಾರ್ಯಕರ್ತರು ಇದೀಗ ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಮತ್ತು ಕರ್ನಾಟಕದ ವಿರುದ್ಧ ಚಟುವಟಿಕೆ ಶುರು ಮಾಡಿಕೊಂಡಿದ್ದಾರೆ.
ಇದರಿಂದಾಗಿ ಎಂಇಎಸ್ ಕಾರ್ಯಕರ್ತರು ಮತ್ತು ಕನ್ನಡ ಪರ ಹೋರಾಟಗಾರರ ನಡುವೆ ಜಾಲತಾಣದಲ್ಲಿ ಫೈಟಿಂಗ್ ಶುರುವಾಗಿದೆ. ಕನ್ನಡ ಪರ ಧ್ವನಿ ಎತ್ತುವ ಬೆಳಗಾವಿ ಫೇಸ್‌ಬುಕ್ ಅಡ್ಮಿನ್ ಮನೆಗೆ ನುಗ್ಗಿ ಹೊಡ್ತಿವಿ ಎಂದು ಬೆದರಿಕೆ ಹಾಕಿದ್ದಾರೆ ಎಂಇಎಸ್ ಕಾರ್ಯಕರ್ತರು. ಈ ಕುರಿತು ಪೋಸ್ಟ್ ಹಾಕುತ್ತಿದ್ದಂತೆಯೇ ಇಬ್ಬರ ನಡುವೆ ಭಾರಿ ಸಮರ ಶುರುವಾಗಿದೆ. ಜತೆಗೆ ಇವರ ವಿರುದ್ಧ ಕನ್ನಡ ಪರ ಹೋರಾಟಗಾರರು ಸೈಬರ್ ಕ್ರೈಂ ಪೊಲೀಸರಲ್ಲಿ ದೂರು ದಾಖಲಿಸಿದ್ದು, ಪುಂಡರ ವಿರುದ್ಧ ಕ್ರಮ ಜರುಗಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಇದರ ನಡುವೆಯೇ, ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಇದನ್ನು ಕರಾಳ ದಿನ ಎಂದು ಆಚರಿಸಲು ಎಂಇಎಸ್ ಕಾರ್ಯಕರ್ತರು ಅಭಿಯಾನ ನಡೆಸಲು ತಯಾರಿ ನಡೆಸಿದ್ದಾರೆ. ಆದರೆ ಈ ಅಭಿಯಾನ ಯಾವುದೇ ಕಾರಣಕ್ಕೂ ನಡೆಯಲು ಅನುಮತಿ ನೀಡುವುದಿಲ್ಲ ಎಂದು ಜಿಲ್ಲಾಡಳಿತ ನಿರಾಕರಿಸಿದೆ. ಇದರಿಂದ ಮತ್ತಷ್ಟು ಕೆರಳಿರುವ ಅವರು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಕನ್ನಡ ವಿರುದ್ಧ ವಿಷ ಬೀಜ ಬಿತ್ತಲು ಶುರು ಮಾಡಿದ್ದಾರೆ.