ಮುಸ್ಲಿಂ ಯುವತಿಯನ್ನು ಮದ್ವೆಯಾದದ್ದೇ ತಪ್ಪಾಯ್ತಾ? ತಂಗಿಯ ಬಾಳಿಗೆ ಕೊಳ್ಳಿ ಇಡಲು ಜೈಲಿನಿಂದಲೇ ಅಣ್ಣನ ಸ್ಕೆಚ್​...

jilani
ಆರೋಪಿ ಜಿಲಾನಿ
Published on

ಬೆಂಗಳೂರು: ತಂಗಿಯನ್ನು ಪ್ರೀತಿಸಿ ವಿವಾಹವಾದ ಎಂಬ ಕಾರಣಕ್ಕೆ ರೌಡಿ ಹತ್ಯೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲೇ ಸುಪಾರಿ ನೀಡಿದ್ದ ರೌಡಿ ಜಿಲಾನ್ ಕಳ್ಳಾಟ ಸಿಸಿಬಿ ತನಿಖೆಯಲ್ಲಿ ಬಯಲಾಗಿದೆ.

ವಿ.ವಿ.ಪುರ ಸಮೀಪದ ಪಾರ್ವತಿಪುರದ ಜಿಲಾನ್‌ನ ಸಹಚರರಾದ ಶೋಯೆಬ್, ನವೀದ್, ಅರ್ಬಾಜ್ ಖಾನ್ ಮತ್ತು ಫೈಝಲ್ ಬಂಧಿತರು. ಶಿವಗಂಗಾ ಮಠದ ರಸ್ತೆಯಲ್ಲಿ ರೌಡಿ ರಾಹುಲ್ ಹತ್ಯೆಗೆ ಆರೋಪಿಗಳು ಹೊಂಚು ಹಾಕಿದ್ದಾಗ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾರ್ವತಿಪುರದಲ್ಲಿ ಜಿಲಾನ್ ಮತ್ತು ರಾಹುಲ್ ನೆರೆಹೊರೆಯವರು. ಹಲವು ವರ್ಷಗಳಿಂದ ಅಪರಾಧಗಳಲ್ಲಿ ಸಕ್ರಿಯವಾಗಿದ್ದರು.

ವಿ.ವಿ.ಪುರ ಠಾಣೆಯಲ್ಲಿ ಇಬ್ಬರ ವಿರುದ್ಧ ರೌಡಿಶೀಟ್ ತೆರೆಯಲಾಗಿದೆ. ಸ್ಥಳೀಯವಾಗಿ ಹಿಡಿತ ಸಾಧಿಸಲು ಮನಸ್ತಾಪವಾಗಿತ್ತು. ಸೋದರಿಯನ್ನು ರಾಹುಲ್ ಪ್ರೀತಿಸುವ ಸಂಗತಿ ತಿಳಿದು ಜಿಲಾನ್ ಕೋಪಗೊಂಡಿದ್ದ. ಅಲ್ಲದೆ, ತಂಗಿ ಸಹವಾಸಕ್ಕೆ ಬರದಂತೆ ರಾಹುಲ್‌ಗೆ ಎಚ್ಚರಿಕೆಯನ್ನೂ ಕೊಟ್ಟಿದ್ದ. 2021ರಲ್ಲಿ ಮಹಿಳೆ ಕೊಲೆ ಪ್ರಕರಣ ಸಂಬಂಧ ಜಿಲಾನ್‌ನನ್ನು ಬಂಧಿಸಿ ವಿ.ವಿ.ಪುರ ಪೊಲೀಸರು ಜೈಲಿಗೆ ಕಳುಹಿಸಿದ್ದರು.

ಇತ್ತ ಜಿಲಾನ್ ಜೈಲು ಸೇರಿದ ಬಳಿಕ ಆತನ ತಂಗಿ ಜತೆ ರಾಹುಲ್ ಮದುವೆ ಆಗಿದ್ದ. ಕೆರಳಿದ ಜಿಲಾನ್, ತನ್ನ ಇಚ್ಛೆಗೆ ವಿರುದ್ಧವಾಗಿ ಸೋದರಿಯನ್ನು ಮದುವೆಯಾದ ಎಂಬ ಕಾರಣಕ್ಕೆ ರಾಹುಲ್ ಕೊಲೆಗೆ ನಿರ್ಧರಿಸಿದ್ದ. ಪಾರ್ವತಿಪುರದ ತನ್ನ ಸಹಚರರಾದ ಶೋಯೆಬ್, ನವೀದ್, ಅರ್ಬಾಜ್ ಖಾನ್ ಮತ್ತು ಫೈಝಲ್‌ನನ್ನು ಸೆಂಟ್ರಲ್ ಜೈಲಿಗೆ ಕರೆಸಿಕೊಂಡು ರಾಹುಲ್ ಹತ್ಯೆಗೆ ಸುಪಾರಿ ನೀಡಿದ್ದ. ಆರೋಪಿಗಳ ಚಲನವಲನಗಳ ಮೇಲೆ ಕಣ್ಣಿರಿಸಿದ್ದ ಪೊಲೀಸರು ಸಿಸಿಬಿ ಎಸಿಪಿ ಎಚ್.ಎನ್. ಧರ್ಮೇಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ದುಷ್ಕರ್ಮಿಗಳನ್ನು ಬಂಧಿಸಿದೆ.

ಜೈಲಿನಲ್ಲಿ ಫೋಟೋ ಶೂಟ್

ಕೊಲೆ ಆರೋಪ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿರುವ ರೌಡಿ ಜಿಲಾನ್, ಜೈಲಿನಲ್ಲಿ ಮೊಬೈಲ್‌ನಲ್ಲಿ ಪೋಟೋ ಶೂಟ್ ಮಾಡಿಸಿಕೊಂಡಿದ್ದ. ಇದರ ಪೋಟೋ ಬಹಿರಂಗವಾಗಿದ್ದು, ಜೈಲಿನಲ್ಲಿ ರೌಡಿಗಳಿಗೆ ವಿಐಪಿ ಸತ್ಕಾರದ ಆರೋಪಕ್ಕೆ ಪುರಾವೆ ಲಭ್ಯವಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net