More

    ಮದ್ವೆಯಾಗುವವರೆಗೂ ಚೆನ್ನಾಗಿ ಹಣ ಲೂಟಿ ಮಾಡಿ ಈಗ ನೀನು ಬೇಡ ಎನ್ನುತ್ತಿರೋ ಪತ್ನಿಯಿಂದ ಮುಕ್ತಿ ಹೇಗೆ?

    ಮದ್ವೆಯಾಗುವವರೆಗೂ ಚೆನ್ನಾಗಿ ಹಣ ಲೂಟಿ ಮಾಡಿ ಈಗ ನೀನು ಬೇಡ ಎನ್ನುತ್ತಿರೋ ಪತ್ನಿಯಿಂದ ಮುಕ್ತಿ ಹೇಗೆ?ಹೆಂಡತಿಯಿಂದ ಬದುಕು ಮೂರಾಬಟ್ಟೆಯಾಗಿದೆ. ನಮ್ಮದು ಪ್ರೇಮವಿವಾಹ ಎಂದು ನಾನೆಂದುಕೊಂಡಿದ್ದೆ. ಆದರೆ ಅದು ಬರೀ ಮೋಸದ ವಿವಾಹವಾಯಿತು. ನನ್ನ ಹೆಂಡತಿ 9ನೇ ಕ್ಲಾಸಿನಲ್ಲಿರುವಾಗಲೇ ನನಗೆ ಪರಿಚಯವಾದಳು. ಆಗಿನಿಂದಲೇ ನಾನವಳನ್ನು ಪ್ರೀತಿಸುತ್ತಿದ್ದೆ. ಅವಳಿಗೂ ನನ್ನ ಬಗ್ಗೆ ಪ್ರೀತಿಯಿರುವ ಹಾಗೆ ಅನ್ನಿಸಿತು. ನನಗಿಂತಾ ಅವಳು 8 ವರ್ಷಕ್ಕೆ ಚಿಕ್ಕವಳು.

    ನನ್ನ ವಿದ್ಯಾಭ್ಯಾಸ ಮುಗಿದು ಪರದೇಶದಲ್ಲಿ ಕೆಲಸ ಸಿಕ್ಕಾಗ ನಾನು ಆ ಹುಡುಗಿಯ ಮನೆಗೆ ಹೋಗಿ ” ನಿಮ್ಮ ಮಗಳು ನನಗೆ ಇಷ್ಟವಾಗಿದ್ದಾಳೆ ಮದುವೆ ಮಾಡಿಕೊಡಿ ” ಎಂದು ಕೇಳಿದೆ. ಅದಕ್ಕವರು ” ಅವಳು ಇನ್ನೂ ಓದುತ್ತಿದ್ದಾಳೆ, ನಾವು ಬಡವರು ನೀನು ಅವಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದರೆ, ಅವಳ ಓದು ಮುಗಿದ ತಕ್ಷಣ ಮದುವೆ ಮಾಡುತ್ತೇವೆ ” ಎಂದು ಹೇಳಿದರು. ನಾನು ಒಪ್ಪಿ ಅವಳ ಮುಂದಿನ ಶಿಕ್ಷಣಕ್ಕೆ ಮತ್ತು ನರ್ಸಿಂಗ್ ಕೋರ್ಸ್‍ಗೆ ಹದಿನೈದು ಲಕ್ಷರೂಪಾಯಿ ಖರ್ಚು ಮಾಡಿದೆ. ನಾನುಹೀಗೆ ಹಣ ಕೊಟ್ಟಿದ್ದಕ್ಕೆ ಬ್ಯಾಂಕಿನ ದಾಖಲೆಗಳಿವೆ. ನಂತರ ಅವರು ಮದುವೆಗೂ ತಮ್ಮ ಹತ್ತಿರ ಹಣವಿಲ್ಲವೆಂದರು. ಅದನ್ನೂ ನಾನೇ ಖರ್ಚು ಮಾಡಿ ಸರಳವಾಗಿ ಮದುವೆಯಾದೆ.

    ಮೊದಲ ರಾತ್ರಿಯೇ ನನ್ನ ಹೆಂಡತಿಯಾದವಳು ” ನನಗೆ ನಿನ್ನನ್ನು ಕಂಡರೆ ಇಷ್ಟವಿಲ್ಲ, ನನ್ನಪ್ಪನ ಬಲವಂತಕ್ಕೆ ಮದುವೆಯಾದೆ ” ಎಂದು ಬಿಟ್ಟಳು. ನನ್ನ ತಂದೆತಾಯಿಯರು, ಹಿರಿಯರು ಎಲ್ಲರೂ ಸೇರಿ ಈ ವಿವಾಹವನ್ನು ಊರ್ಜಿತ ಮಾಡಲು ಪ್ರಯತ್ನ ಪಟ್ಟರು. ನನಗೆ 15 ದಿನ ರಜೆಹಾಕಿಸಿ ನಮ್ಮಿಬ್ಬರನ್ನು ಒಂದೇ ಮನೆಯಲ್ಲಿರುವಂತೆ ಏರ್ಪಾಡು ಮಾಡಿದರು. ಆಗಲೂ ನನ್ನ ಹೆಂಡತಿ ನನ್ನ ಜೊತೆ ಸರಿಯಾಗಿ ಇರಲಿಲ್ಲ. ಒಂದು ದಿನ ನಾನು ಹೊರಹೋಗಿ ಮನೆಗೆ ಬಂದಾಗ ಅವಳ ಕಸಿನ್ ಜೊತೆ ಹಾಸಿಗೆಯಲ್ಲಿ ನಾನು ನೋಡಬಾರದ ಸ್ಥಿತಿಯಲ್ಲಿ ಮಲಗಿದ್ದಳು. ನಾನದನ್ನು ಕಿಟಕಿಯಿಂದ ಮೊಬೈಲ್‍ನಲ್ಲಿ ಫೋಟೋ ತೆಗೆದಿದ್ದೇನೆ. ಈಗ ವಿಚ್ಛೆದನಕ್ಕೆ ಕೋರ್ಟಿಗೆ ಹೋಗಿದ್ದೇನೆ. ಅವಳು ” ನಾನು ವರದಕ್ಷಿಣೆ ಕೇಳಿ ದೈಹಿಕ ಹಿಂಸೆ ಮಾಡಿದೆ, ನಾನು ಮಾನಸಿಕವಾಗಿ ಸರಿಯಾಗಿಲ್ಲ ಎಂದೆಲ್ಲಾ ಸ್ಟೇಟ್‍ಮೆಂಟ್ ಕೊಟ್ಟಿದ್ದಾಳೆ. ನನಗಂತೂ ದಿಕ್ಕೇ ತೋಚುತ್ತಿಲ್ಲ. ನಾನು ನೋಡಿದರೆ ಪರದೇಶದಲ್ಲಿದ್ದೇನೆ. ಜೊತೆಗೆ ಹದಿನೈದು ದಿನವೂ ಸರಿಯಾಗಿರದೇ ಬೇರೆಯಾಗಿದ್ದೇವೆ. ಈಗ ಐದು ವರ್ಷಗಳಿಂದ ನಾನಿಲ್ಲಿ, ಅವಳಲ್ಲಿ, ಆದರೂ ದೈಹಿಕ ಹಿಂಸೆಯ ಆರೋಪ! ಇದಕ್ಕೇನಾದರೂ ಪರಿಹಾರವಿದೆಯೇ?

    ಉತ್ತರ: ಖಂಡಿತಾ ಇದೆ. ನಿಮ್ಮ ಈ ಸಮಸ್ಯೆಗೆ ಎರಡು ಮಗ್ಗುಲುಗಳಲ್ಲಿ ಪರಿಹಾರವನ್ನು ಕಂಡುಕೊಳ್ಳಬಹುದು. ಮೊದಲನೆಯದಾಗಿ ಕಾನೂನಿನ ಮೂಲಕ. ನೀವು ಅವಳ ವಿದ್ಯಾಭ್ಯಾಸಕ್ಕೆ ಹಣಕೊಟ್ಟದ್ದಕ್ಕೆ ಬ್ಯಾಂಕಿನ ದಾಖಲೆಗಳಿವೆ ಎಂದು ಬರೆದಿದ್ದೀರಿ. ನಿಮ್ಮ ಕೇಸಿಗೆ ಅದೂ ಒಂದು ಸಾಕ್ಷಿಯಾಗುತ್ತದೆಯಲ್ಲವೇ? ಮತ್ತೊಂದು ಅವಳ ಅನೈತಿಕ ಚಿತ್ರ ನಿಮ್ಮ ಹತ್ತಿರವಿದೆ. ಅದನ್ನೂ ಕೋರ್ಟಿಗೆ ಪ್ರಡ್ಯೂಸ್ ಮಾಡಬಹುದೆನಿಸುತ್ತದೆ. ಈ ಬಗ್ಗೆ ನೀವು ವಕೀಲರ ಹತ್ತಿರ ವಿಚಾರಿಸ ಬೇಕು.

    ಎರಡನೆಯದಾಗಿ ಮಾನಸಿಕ ಕಾರಣಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ. ಆಗ ನಿಮಗೆ ಈಗ ಆಗುತ್ತಿರುವ ಕೋಪ ವಿಷಾದಗಳು ಬೇರೆಯದೇ ರೀತಿಯಲ್ಲಿ ಕಾಣಬಹುದು. ನಿಮ್ಮ ಒಳ್ಳೆಯ ತನವನ್ನು ಮತ್ತು ನೀವು ಹುಡುಗಿಯಲ್ಲಿ ತೋರಿಸಿದ ಆಸಕ್ತಿಯನ್ನು ಆ ಜನ ದುರುಳುತನದಿಂದ ಬಳಸಿಕೊಂಡು ನಿಮ್ಮಿಂದ ಹಣಕಿತ್ತಿದ್ದಾರೆ. ಆ ಮಟ್ಟಿಗೆ ನೀವು ಮೋಸ ಹೋಗಿದ್ದೀರಿ. ಇದಕ್ಕೆ ಆ ಹುಡುಗಿ ಎಷ್ಟು ಕಾರಣವೋ ಗೊತ್ತಿಲ್ಲ.

    ಇನ್ನೊಂದು. ನೀವು ಹುಡುಗಿಯ ಬಗ್ಗೆ ಯೋಚಿಸಬೇಕಾಗಿರುವುದು – ನೀವು ಆಕೆಯನ್ನು ಕಂಡಾಗ ಆಕೆ ಇನ್ನೂ ೯ನೇ ತರಗತಿಯಲ್ಲಿ ಓದುತ್ತಿದ್ದಳು. ಅದು ಅಪ್ರಾಪ್ತವಯಸ್ಸು ಪ್ರೇಮ ಪ್ರೀತಿಗಳ ಬಗ್ಗೆ ತಿಳಿವಳಿಕೆ ಇಲ್ಲದ ವಯಸ್ಸು. ನಿಮ್ಮ ಹಣ, ಅಂತಸ್ತು, ನಿಲುವುಗಳನ್ನು ಕಂಡು ಮರುಳಾಗಿರಬಹುದು. ನಂತರ ನೀವು ಪರದೇಶಕ್ಕೆ ಹೋಗಿಬಿಟ್ಟಿದ್ದೀರಿ. ಕಣ್ಣಿಂದ ದೂರಾದರೆ ಮನಸ್ಸಿನಿಂದಲೂ ದೂರಾಗುವುದು ಮನುಷ್ಯನ ಸಹಜ ಸ್ವಭಾವಗಳಲ್ಲಿ ಒಂದು. ಆಕೆ ತನ್ನ ವಿದ್ಯಾಭ್ಯಾಸವನ್ನು ಮುಗಿಸುವ ಹೊತ್ತಿಗೆ ತನ್ನ ಮನೋಭೀಷ್ಟೆಗೆ ತಕ್ಕಂತೆ ಯಾರನ್ನೋ ಮೋಹಿಸಿರಬಹುದು. ಇವೆಲ್ಲವೂ ಬೆಳೆಯುವ ವಯಸ್ಸಿನಲ್ಲಿ ಸಹಜವಾಗಿ ಆಗುವಂತಹ ಕ್ರಿಯೆಗಳು. ಇಲ್ಲಿ ನಿಜವಾಗಿಯೂ ಸ್ವಾರ್ಥಿಗಳೂ, ದುರಾಚಾರಿಗಳೂ ಆಗಿರುವವರು ಆಕೆಯ ತಂದೆತಾಯಿ. ಅವಳಿಗೆ ಮತ್ತೊಬ್ಬನ ಮೇಲೆ ಪ್ರೀತಿಯಿರುವುದನ್ನು ತಿಳಿದೂ ನಿಮ್ಮಿಂದ ಹಣ ವಸೂಲಿಮಾಡಿ ಮದುವೆ ಮಾಡಿಕೊಟ್ಟಿದ್ದಾರೆ. ಇದು ತೀರಾ ಧೂರ್ತತನ.

    ನೀವು ಕೇಸನ್ನು ನೇರವಾಗಿ ಅವರ ಮೇಲೇ ಹಾಕಬಹುದೇನೋ. ಈಗಲೂ ಏನು ಕಾಲಮಿಂಚಿಲ್ಲ. ನಿಮ್ಮ ಹತ್ತಿರ ಬಲವಾದ ಸಾಕ್ಷಿಗಳಿರುವುದರಿಂದ ಸರಿಯಾದ ವಕೀಲರನ್ನು ನೋಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. ಸರಿಯಾದ ಹುಡುಗಿಯನ್ನು ನೋಡಿ ಮತ್ತೊಂದು ಮದುವೆಯಾಗುವುದಕ್ಕೂ ಕಾಲವೇನೂ ಮಿಂಚಿಲ್ಲ.

    ನೂತನ ಸಿಎಂ ಪ್ರಮಾಣ ವಚನದ ದಿನ ಅಚ್ಚರಿಯ ಘಟನೆ: 7 ವರ್ಷಗಳಿಂದ ಕಾಣೆಯಾಗಿದ್ದ ಮಗ ಪಾಲಕರಿಗೆ ಸಿಕ್ಕ!

    ಕರುಳ ಕುಡಿಯನ್ನೇ ಜೀವಂತ ಹೂತು ಹಾಕಿದ ಅಮ್ಮ! ಪವಾಡಸದೃಶವಾಗಿ ಬದುಕಿದ ಮುದ್ದು ಕಂದ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts