ಜ್ವರದಿಂದ ಬಳಲ್ತಿದ್ದಾರೆ ಸಿದ್ದರಾಮಯ್ಯ, ಎರಡು ದಿನ ಫುಲ್‌ ರೆಸ್ಟ್‌- ಕಾರ್ಯಕ್ರಮಗಳು ರದ್ದು

siddarammai
Published on

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ನಿನ್ನೆ ರಾತ್ರಿಯಿಂದ ಜ್ವರ ಕಾಣಿಸಿಕೊಂಡಿದೆ. ಹಿಂದೊಮ್ಮೆ ಕರೊನಾ ಸೋಂಕಿನಿಂದ ಬಳಲಿ ನಂತರ ಚೇತರಿಸಿಕೊಂಡಿರುವ ಸಿದ್ದರಾಮಯ್ಯ ಅವರಿಗೆ ಈಗ ಜ್ವರ ಕಾಣಿಸಿಕೊಂಡಿರುವ ಕಾರಣ, ಮುಂಜಾಗ್ರತಾ ಕ್ರಮವಾಗಿ ಕರೊನಾ ಪರೀಕ್ಷೆ ಕೂಡ ಮಾಡಿಸಲಾಗಿದೆ.

ಈ ಕುರಿತು ಅವರ ಆಪ್ತರಾಗಿರುವ ವೈದ್ಯ ಡಾ.ರವಿ ಕುಮಾರ್ ಮಾಹಿತಿ ನೀಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ತಪಾಸಣೆ ನಡೆಸಲಾಗಿದೆ. ಜ್ವರ ಇರುವ ಕಾರಣ ವಿಶ್ರಾಂತಿಗೆ ಸೂಚಿಸಲಾಗಿದೆ, ಅವರು ತಮ್ಮ ಮನೆಯಲ್ಲಿಯೇ ವಿಶ್ರಾಂತಿ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.

ಸದ್ಯ ಅವರಿಗೆ ವಿಶ್ರಾಂತಿ ಅಗತ್ಯ ಇರುವ ಕಾರಣದಿಂದಾಗಿ ಎರಡು ದಿನಗಳ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ ಎಂದು ತಿಳಿದುಬಂದಿದೆ. ಇಂದು ಬೆಂಗಳೂರಿನ ಅನೇಕ ಕ್ಷೇತ್ರಗಳಿಗೆ ತೆರಳಿ ಉಚಿತ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವೀಗ ರದ್ದು ಮಾಡಲಾಗಿದೆ. ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ ಬೆಂಗಳೂರಿನ ವಿವಿಧೆಡೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಿಟ್ ವಿತರಣೆ ಮಾಡಲಿದ್ದಾರೆ.

ಜ್ವರ ಇರುವ ಕಾರಣದಿಂದಾಗಿ ತಮ್ಮ ನಿವಾಸದಲ್ಲಿಯೂ ಯಾರನ್ನೂ ಭೇಟಿ ಮಾಡದಿರಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net