ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್​ನ್ಯೂಸ್​: ಶೂಸ್​, ಸಾಕ್ಸ್​ಗಾಗಿ ಸರ್ಕಾರದಿಂದ 132 ಕೋಟಿ ರೂ ಬಿಡುಗಡೆ

1297626
Published on

ಬೆಂಗಳೂರು: ಶಾಲಾ ಮಕ್ಕಳಿಗೆ ಶೂಸ್​ ಮತ್ತು ಸಾಕ್ಸ್ ಹಂಚಿಕೆಗೆ 132 ಕೋಟಿ ರೂ.ಗಳನ್ನು ಒದಗಿಸಿ ಅನುಮೋದನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸಮವಸ್ತ್ರದ ವಿಚಾರದಲ್ಲಿ ಸರ್ಕಾರ ಈಗಾಗಲೇ ಸಮವಸ್ತ್ರಕ್ಕೆ ಅನುಮೋದನೆ ನೀಡಿದೆ. ಸಮವಸ್ತ್ರ ತಯಾರಾಗಲು ಸ್ವಲ್ಪ ಸಮಯ ಹಿಡಿಯುತ್ತದೆ. ನಂತರ ವಿತರಣೆಯಾಗಲಿದೆ. ಈ ವಿಷಯದಲ್ಲಿ ಯಾವುದೇ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರಿಗೆ ಸಿಎಂ ಬೊಮ್ಮಾಯಿ ಟಾಂಗ್​ ನೀಡಿದ್ದಾರೆ. ಶಾಲಾ ಮಕ್ಕಳಿಗೆ ಶೂಸ್​, ಸಾಕ್ಸ್ ಕೊಡಲು ಸರ್ಕಾರದ ಬಳಿ ಹಣವಿಲ್ಲದಿದ್ದರೇ, ಕಾಂಗ್ರೆಸ್ ಪಕ್ಷ ರಾಜ್ಯದ ಜನರ ಬಳಿ ಭಿಕ್ಷೆ ಬೇಡಿ ಹಣ ಸಂಗ್ರಹಿಸಿ ನೀಡುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ ಬೊಮ್ಮಾಯಿ, ಈ ಹಿಂದೆ ಕೋವಿಡ್ ಸಮಯದಲ್ಲಿ ಭಿಕ್ಷೆ ಬೇಡಿ ಜನರಿಗೆ ಕೊಡುತ್ತೇವೆ ಎಂದು ಅವರು ಹೇಳಿದ್ದರು‌. ಆ ಹಣ ಎಲ್ಲಿ ಎಂದು ಕೇಳಿದರು. ಎಂದಿನಂತೆಯೇ ಇದು ಕೂಡ ಎಂದು ಮುಖ್ಯಮಂತ್ರಿಗಳು ಮಂದಹಾಸ ಬೀರಿದರು.

ಶಿಕ್ಷಣ ಸಚಿವ ನಾಗೇಶ್ ಅವರು ಮಕ್ಕಳು ಶಾಲೆಗೆ ಹೋಗುವುದು ಪಾಠ ಕಲಿಯಲೇ ಹೊರತು ಶೂಸ್​ ಹಾಕಿಕೊಳ್ಳಲು ಅಲ್ಲ ಎಂದಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಡಿಕೆಶಿ ಭಿಕ್ಷೆ ಎತ್ತಿ ನೀಡುವ ಮಾತನಾಡಿದ್ದರು. ಅದಕ್ಕೆ ಈಗ ಸಿಎಂ ಬೊಮ್ಮಾಯಿ ಈ ರೀತಿ ತಿರುಗೇಟು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net