

ಬೆಂಗಳೂರು: ದೇಶದಲ್ಲಿ ಅಕ್ಕಿ, ಗೋದಿ ಆಮದು ಮಾಡಲಾಗ್ತಿತ್ತು. ಹಸಿರು ಕ್ರಾಂತಿ ಆದ ಬಳಿಕ, ಸ್ವಾವಲಂಬಿ ಆಗಿದ್ದೇವೆ. ಕರೊನಾ ಸಂದರ್ಭದಲ್ಲೂ 305 ಮಿಲಿಯನ್ ಮೆಟ್ರಿಕ್ ಟನ್ ಬೆಳೆ ಬೆಳೆ ಬೆಳೆದಿದ್ದೇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಲವಾರು ಸರ್ಕಾರ ಪ್ರಯತ್ನ ಮಾಡಿದ್ದವು. ದೇಶದಲ್ಲಿ ಆಹಾರ ಸರಬರಾಜು ಮಾಡೋ ದೇಶಗಳ ಪೈಕಿ 9ನೇ ಸ್ಥಾನಕ್ಕೆ ಬಂದು ತಲುಪಿದ್ದೇವೆ ಎಂದರು. ಜಿಡಿಪಿ ಕೇವಲ ಶೇ.16.5 ಕೊಡುತ್ತಿದ್ದೆವು. ಆದರೀಗ ಕೃಪಿಯ ಮೂಲಕ ಶೇ.20 ಜಿಡಿಪಿ ಕೊಡುತ್ತಿದ್ದೇವೆ. ಈ ಮೂಲಕ ಕೃಷಿಯ ಮೂಲಕ ದೇಶದ ಅಭಿವೃದ್ಧಿ ಮಾಡುತ್ತಿದ್ದೇವೆ. ರೈತರಿಗೆ ಕೋಟ್ಯಂತರ ಹಣ ಅಕೌಂಟಿಗೆ ಹಾಕಲಾಗಿದೆ ಎಂದರು.
ಫಸಲ್ ಭೀಮಾ ಯೋಜನೆ ಪಡೆಯಬೇಕಾದರೆ, ಇನ್ಶುರೆನ್ಸ್ ಕ್ಲಿಯರ್ ಮಾಡಿ ಹೋಗಬೇಕಿತ್ತು. ಮೊದಲ ಬಾರಿಗೆ ರೈತ ತನ್ನ ಜಮೀನಿನಲ್ಲಿ ನಿಂತು ಫೋಟೋ ಹೊಡೆದು ಫಸಲ್ ಭೀಮಾ ಯೋಜನೆಗೆ ಫೋಟೋ ಅಪ್‌ಲೋಡ್ ಮಾಡಿದರೆ ಸಾಕು. ಅದರಿಂದ ಫಸಲ್ ಭೀಮಾ ಯೋಜನೆ ಮೂಲಕ ಹಣ ಸಿಗಲಿದೆ. ಎನ್.ಡಿ.ಆರ್.ಎಫ್ ಮೂಲಕ ಹಣ ಬಿಡುಗಡೆ ಮಾಡಲಾಗಿದೆ. ನಮ್ಮ ರಾಜ್ಯದ ಹಲವಾರು ರೈತರು ತೆಂಗು ಬೆಳೆಯುತ್ತಾರೆ. ಇಷ್ಟು ದಿನ ತೆಂಗು ಅಭಿವೃದ್ಧಿ ಮಂಡಳಿಗೆ ಯಾರ್ಯಾರೋ ಅಧ್ಯಕ್ಷರಾಗ್ತಿದ್ರು. ಇನ್ನು ಮುಂದೆ ತೆಂಗು ಬೆಳೆಯುವ ರೈತನೇ ಅಧ್ಯಕ್ಷ ಆಗಬೇಕು ಅಂತ ತಿದ್ದುಪಡಿ ತರಲಾಗಿದೆ ಎಂದು ಶೋಭಾ ಹೇಳಿದರು.
ರೈತ ಕುಟುಂಬದಲ್ಲಿ ಹುಟ್ಟಿದ, ಅತ್ಯಂತ ಕುಗ್ರಾಮದಲ್ಲಿ ಹುಟ್ಟಿದವಳು ನಾನು. ಬಿಜೆಪಿ ಬಹಳಷ್ಟು ನೀಡಿದೆ. ವಿಧಾನಪರಿಷತ್ ಸದಸ್ಯೆ, ವಿಧಾನಸಭೆ ಸದಸ್ಯೆಯಾಗಿ, ರಾಜ್ಯದಲ್ಲಿ ಸಚಿವೆಯಾಗಿ ಕೆಲಸ ಮಾಡಿದ್ದೇನೆ. ನಂತರ ಲೋಕಸಭೆಗೆ ಕಳಿಸಿ, ಈಗ ಸಚಿವೆಯಾಗಿದ್ದೀನಿ. ಯಶವಂತಪುರ ವಿಧಾನಸಭೆಯಾಗಲಿ ಅಥವಾ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ನನ್ನ ತವರೂರಲ್ಲ. ಆದರೂ ಜನರು ಕೈ ಹಿಡಿದರು. ನನಗೆ ಕೇಂದ್ರದಲ್ಲಿ ಕೃಷಿ ಸಚಿವೆಯಾಗಿ ಕೆಲಸ ಮಾಡಲು ಅವಕಾಶ ದೊರೆತಿದೆ ಎಂದರು.
ಸಣ್ಣ ಕುಗ್ರಾಮದಿಂದ ಬಂದವರೂ ಕೇಂದ್ರದ ಸಚಿವ ರಾಗಬಹುದು ಅಂದ್ರೆ ಅದು ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದರು. ಕೃಷಿಇಲಾಖೆಯಂತ ದೊಡ್ಡ ಜವಾಬ್ದಾರಿ ನನ್ನ ಮೇಲೆ ಹೊರಿಸಿದ್ದಾರೆ ಎಂದರು. ಎಣ್ಣೆ ಖಾದ್ಯಗಳನ್ನ ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ವಿದೇಶದಿಂದ ಪಾಮಾಯಿಲ್ ತಂದು, ಇಲ್ಲಿನ ಸೂರ್ಯಕಾಂತಿ ಹಾಗೂ ಇತರೆ ಎಣ್ಣೆಗೆ ಬೆರೆಸಲಾಗ್ತಿದೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಕೆಲವೇ ದಿನಗಳಲ್ಲಿ ಎಣ್ಣೆ ತಯಾರಿಸುವಲ್ಲಿ ಸ್ವಾವಲಂಬಿ ಆಗಬೇಕಿದೆ. ಈ ಮೂಲಕ ಹೊರ ದೇಶದಿಂದ ಬರುವ ಎಣ್ಣೆಗೆ ಬ್ರೇಕ್ ಹಾಕಬೇಕಿದೆ ಎಂದು ಸಚಿವೆ ನುಡಿದರು.
ಮಿಲೆಟ್ಸನ್ನ ಡ್ರೈ ಲ್ಯಾಂಡಲ್ಲಿ ಬೆಳೆಯಲು ಮಾತ್ರ ಸಾಧ್ಯ. ಯುನೈಟೆಡ್ ದೇಶಗಳೂ ಕೂಡ ಇದಕ್ಕೆ ಹೆಚ್ಚು ಮಹತ್ವ ನೀಡಿದೆ. ಇದಕ್ಕಾಗಿ ಸಿರಿ ಧಾನ್ಯ ಬೆಳೆಯುವ ಕೆಲಸ ಮಾಡಬೇಕಿದೆ. ನಮ್ಮ ರಾಜ್ಯವೂ ಕೂಡ ಮಿಲೆಟ್ಸ್ ಬೆಳೆಯೋ ರಾಜ್ಯವಾಗಿದ್ದು. ಅದನ್ನ ರಫ್ತು ಮಾಡುವ ಕೆಲಸ ಮಾಡಬೇಕಿದೆ. ಮುಂದಿನ ದಿನಗಳಲ್ಲಿ ರೈತರ ಬದುಕು ಮತ್ತಷ್ಟು ಉತ್ತಮಪಡಿಸುವ ಕೆಲಸ ಮಾಡಬೇಕಿದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಿಗೆ ಸೇರಿ ಕೆಲಸ ಮಾಡಬೇಕಿದೆ. ಕೃಷಿ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ಉತ್ತಮ ಮಳೆಯಾಗಿದೆ. ಬರುವ ದಿನಗಳಲ್ಲಿ ರಫ್ತಿಗೆ ಹೆಚ್ಚು ಆದ್ಯತೆ ನೀಡಬೇಕಿದೆ. ಸಚಿವ ಮುರುಗೇಶ್ ನಿರಾಣಿ ಜೊತೆ ಮಾತನಾಡಿದ್ದೇನೆ ಎಂದರು. ನಮ್ಮ ರಾಜ್ಯ ರಫ್ತು ವಿಚಾರದಲ್ಲಿ ಹಿಂದುಳಿದಿದೆ. ಎಕ್ಸ್ ಪೋರ್ಟ್ ಮಾಡುವ ಇಲಾಖೆ ಹೆಚ್ಚು ಆದ್ಯತೆ ನೀಡಬೇಕು. ಐಟಿ-ಬಿಇ ಗೆ ಮಾತ್ರ ಹೆಚ್ಚು ಒತ್ತು ನೀಡಲಾಗ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಕೃಷಿಗೆ ಆದ್ಯತೆ ನೀಡುವಂತೆ ಸೂಚಿಸಿದ್ದೇನೆ ಎಂದರು.