VIDEO: ನಾವು ಬದಲಾಗಿದ್ದೇವೆ ಎಂದರು... ನಂಬಿ ಕಚೇರಿಗೆ ಹೋದೆ.. ಆದರೆ... ಕರಾಳ ಅನುಭವ ಬಿಚ್ಚಿಟ್ಟ ಪತ್ರಕರ್ತೆ

journalist
Published on

ಕಾಬುಲ್: ಅಫ್ಘಾನಿಸ್ತಾನ ಸಂಪೂರ್ಣ ತಾಲಿಬಾನ್‌ ಹಿಡಿತದಲ್ಲಿ ಸಿಕ್ಕಮೇಲೆ ತಾವು ಒಳ್ಳೆಯ ಆಡಳಿತ ನಡೆಸುವುದಾಗಿ ತಾಲಿಬಾನಿಗಳು ಘೋಷಣೆ ಮಾಡಿದರು. ಅದರ ಬೆನ್ನಲ್ಲೇ ಮಹಿಳೆಯರು ಮತ್ತು ಹೆಣ್ಣುಮಕ್ಕಳಿಗೆ ಎಲ್ಲಾ ರೀತಿಯ ಸ್ವಾತಂತ್ರ್ಯ ನೀಡಲಾಗುವುದು, ಮಹಿಳೆಯರಿಗೆ ಕಚೇರಿಗೆ ಹೋಗಲು ಅವಕಾಶ ಕಲ್ಪಿಸಲಾಗುವುದು, ನಮ್ಮ ದೇಶದಲ್ಲಿ ಈಗಲೂ ಮಹಿಳೆಯರು ಸ್ವತಂತ್ರರು ಎಂದೆಲ್ಲಾ ಭಾಷಣ ಬಿಗಿದರು.

ಇದೇ ಖುಷಿಯಲ್ಲಿ ಪತ್ರಕರ್ತೆ ಶಬನಮ್‌ ದರ್ವನ್‌ ತಮ್ಮ ಕಚೇರಿಗೆ ಹೋದಾಗ ಅಲ್ಲಿ ಅವರಿಗೆ ಆದದ್ದು ಕರಾಳ ಅನುಭವ. ಅದನ್ನು ಅವರು ಬಿಚ್ಚಿಟ್ಟದ್ದು ಹೀಗೆ:

ನಾನು ಹಲವಾರು ಡಿಗ್ರಿಗಳನ್ನು ಪಡೆದಿದ್ದೇನೆ, ರ್ಯಾಂಕ್‌ ವಿದ್ಯಾರ್ಥಿನಿ. ಅಫ್ಘಾನಿಸ್ತಾನದಲ್ಲಿ ಪತ್ರಕರ್ತೆ. ಸರ್ಕಾರಿ ಸ್ವಾಮ್ಯದ ವಾಹಿನಿಯೊಂದ ಉದ್ಯೋಗಿ. ಈ ಉದ್ಯೋಗದಲ್ಲಿ ತುಂಬಾ ಹೆಸರು ಕೂಡ ಮಾಡಿದ್ದೇನೆ. ಆದರೆ ತಾಲಿಬಾನಿಗಳು ಹೆಣ್ಣುಮಕ್ಕಳನ್ನು ನಡೆಸಿಕೊಂಡಿರುವ ರೀತಿಯಿಂದ ನಾನು ಕಂಗಾಲಾಗಿ ಹೋಗಿದ್ದೆ. ಇನ್ನು ನಾವು ಉದ್ಯೋಗ ಮಾಡುವುದು ದೂರದ ಮಾತು, ಒಂಟಿಯಾಗಿ ರಸ್ತೆಗೆ ಇಳಿಯುವಂತೆಯೂ ಇಲ್ಲ ಎಂದು ಕರಾಳ ಭವಿಷ್ಯವನ್ನು ನೆನೆದು ಕಣ್ಣೀರಿಟ್ಟಿದ್ದೆ.

ಆದರೆ ಅದಾಗಲೇ ತಾಲಿಬಾನಿಗಳು ಘೋಷಣೆ ಮಾಡಿದರು. ಅದೇನೆಂದರೆ ನಾವು ಬದಲಾಗಿದ್ದೇವೆ. ಮಹಿಳೆಯರು ಉದ್ಯೋಗಕ್ಕೆ ತೆರಳಲು ಅನುಮತಿ ನೀಡುತ್ತೇವೆ ಎಂದರು. ಇದನ್ನು ಕೇಳಿ ನಾನು ಮಾತ್ರವಲ್ಲ, ನನ್ನಂಥ ಎಷ್ಟೋ ಉದ್ಯೋಗಸ್ಥ ಮಹಿಳೆಯರು ಖುಷಿಯಿಂದ ಜಿಗಿದಾಡಿದರು.

ಇದನ್ನೇ ನಂಬಿ ನಾನು ಕಚೇರಿಗೆ ಹೋದೆ. ಆದರೆ ಒಳಗಡೆ ಕಾಲಿಡಲೂ ನನಗೆ ಬಿಡಲಿಲ್ಲ. ನೀವಿನ್ನು ಬರಬೇಡಿ ಎಂದರು. ನನ್ನನ್ನು ಕೆಲಸಕ್ಕೆ ಸೇರಿಸುವುದಿಲ್ಲ ಎಂದು ಹೇಳಿದರು. ಯಾಕೆ ಎಂದು ಪ್ರಶ್ನಿಸಿದೆ. ಈಗ ನಿಯಮಗಳು ಬದಲಾಗಿವೆ, ಮಹಿಳೆಯರಿಗೆ ಇನ್ನು ಮುಂದೆ ಕೆಲಸ ಮಾಡಲು ಅವಕಾಶವಿಲ್ಲ ಎಂದರು. ಆದರೆ ಅವರು ಇದಾಗಲೇ ಮಹಿಳೆಯರಿಗೆ ಉದ್ಯೋಗಕ್ಕೆ ಅವಕಾಶ ಕೊಟ್ಟಿದ್ದಾರಲ್ಲ ಎಂದು ಹೇಳಿದೆ. ಅದಕ್ಕೆ ನಮ್ಮ ಮು‌ಖ್ಯಸ್ಥರು ಅದೆಲ್ಲಾ ನಮಗೆ ಗೊತ್ತಿಲ್ಲ. ಆದರೆ ನಮಗೆ ಸ್ಟ್ರಿಕ್ಟ್‌ ಎಚ್ಚರಿಕೆ ಬಂದಿದೆ. ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಕೆಲಸಕ್ಕೆ ಬರಲು ಕೊಡಬೇಡಿ ಎನ್ನಲಾಗಿದೆ. ಆದ್ದರಿಂದ ನೀವಿನ್ನು ಮನೆಗೆ ಹೋಗಬಹುದು. ಮತ್ತೊಮ್ಮೆ ಇತ್ತ ಬರುವ ಸಾಹಸಕ್ಕೆ ಕೈಹಾಕಬೇಡಿ ಎಂದರು’ ಎಂದು ಪತ್ರಕರ್ತೆ ಶಬನಮ್‌ ಹೇಳಿದ್ದಾರೆ.

ಸದ್ಯಕ್ಕೆ ಅಫ್ಘಾನಿಸ್ತಾನದಲ್ಲಿ ಬದುಕುವುದು ಕಷ್ಟ. ನನಗೆ ಯಾರಾದರೂ ಇಲ್ಲಿ ಸಹಕಾರ ನೀಡಿದರೆ ಖಂಡಿತವಾಗಿಯೂ ನಾನು ಈ ದೇಶವನ್ನೇ ತೊರೆಯುತ್ತೇನೆ ಎಂದು ಮಾಧ್ಯಮದಲ್ಲಿಯೇ ಕಣ್ಣೀರಿಟ್ಟಿದ್ದಾರೆ ಶಬನಮ್‌.

ಶಬನಮ್‌ ಅವರ ವಿಡಿಯೋ ಇಲ್ಲಿದೆ ನೋಡಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net