

ಶಿವಮೊಗ್ಗ: ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಅವರ ಭಾವಚಿತ್ರವನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅಳವಡಿಸಿದ್ದ ವಿವಾದದಿಂದಾಗಿ ಶಿವಮೊಗ್ಗ ಹೊತ್ತಿ ಉರಿದಿತ್ತು. ಆಗಸ್ಟ್ 15ರಂದು ಸಾವರ್ಕರ್ ಫೋಟೋ ತೆಗೆದು ಆ ಜಾಗದಲ್ಲಿ ಟಿಪ್ಪು ಸುಲ್ತಾನ್ ಫೋಟೋ ಹಾಕಲು ಮುಂದಾಗುತ್ತಿದ್ದಂತೆಯೇ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿತ್ತು. ಈ ಘರ್ಷಣೆಯ ಸಮಯದಲ್ಲಿ 20 ವರ್ಷದ ಯುವಕ ಪ್ರೇಮ್ಸಿಂಗ್ ಎಂಬಾತನನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದರು.
ಪ್ರಕರಣ ಸಂಬಂಧ ನಾಲ್ವರನ್ನು 24 ಗಂಟೆಯೊಳಗಾಗಿ ಬಂಧಿಸಿದ್ದ ದೊಡ್ಡಪೇಟೆ ಪೊಲೀಸರು. ಮೊಹಮ್ಮದ್ ಜಬೀ (30), ನದೀಮ್ (25), ಅಬ್ದುಲ್ ರೆಹಮಾನ್ (25) ಹಾಗೂ ತನ್ವೀರ್ (22) ಬಂಧಿಸಿದ್ದರು. ಈ ಘಟನೆಯ ನಂತರ ಹಿಂದೂ ಮತ್ತು ಮುಸ್ಲಿಂ ಕೋಮಿನವರ ನಡುವೆ ಘರ್ಷಣೆ ತಾರಕಕ್ಕೇರಿತ್ತು. ಈ ಆರೋಪಿಗಳ ಬೆನ್ನಟ್ಟಿ ಹೋಗಿದ್ದ ಪೊಲೀಸರಿಗೆ ಇವರ ಭಯಾನಕ ಇತಿಹಾಸದ ಬಗ್ಗೆಯೂ ತಿಳಿದುಬಂದಿತ್ತು. ವಿವಿಧ ಉಗ್ರ ಸಂಘಟನೆಗಳ ಜತೆಗೆ ಇವರು ಗುರುತಿಸಿಕೊಂಡಿರುವ ಬಗ್ಗೆ ತಿಳಿದುಬಂದಿದೆ.
ಇದರ ಬೆನ್ನಲ್ಲೇ ಆರೋಪಿಗಳಿಗೆ ಈಗ ಪೊಲೀಸರು ಶಾಕ್ ನೀಡಿದ್ದಾರೆ. ಆರೋಪಿಗಳ ವಿರುದ್ಧ ಯುಎಪಿಎ ಕಾಯ್ದೆ-1967 (The Unlawful (Prevention) ACT-1967) ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಾಕು ಇರಿತ ಪ್ರಕರಣದ ತನಿಖೆಯಲ್ಲಿ ಕೆಲ ಮಹತ್ವದ ದಾಖಲೆ ದೊರೆತ ಹಿನ್ನೆಲೆಯಲ್ಲಿ ಈ ಕೇಸ್ ದಾಖಲು ಮಾಡಲಾಗಿದೆ. ಮೂಲಭೂತವಾದದ ಪ್ರಭಾವಕ್ಕೆ ಒಳಗಾಗಿ ಕೃತ್ಯವೆಸಗಿರುವುದು ತನಿಖೆಯಲ್ಲಿ ಸಾಬೀತು ಆಗಿದೆ. ಜತೆಗೆ ತನಿಖೆ ವೇಳೆ ಯುಎಪಿಎ ಕಾಯ್ದೆಯಲ್ಲಿನ ಅಂಶಗಳು ಕಂಡ ಬಂದ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಯುಎಪಿಎ ಕಾಯ್ದೆ ಅಳವಡಿಸಿ, ಮತ್ತಷ್ಟು ತನಿಖೆ ಕೈಗೊಂಡಿದ್ದಾರೆ ಪೊಲೀಸರು.
ಈ ಆರೋಪಿಗಳ ಪೈಕಿ ಮೊಹಮ್ಮದ್ ಜಬೀವುಲ್ಲಾ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳುತ್ತಿದ್ದಂತೆಯೇ ಆತನ ಕಾಲಿಗೆ ಗುಂಡು ಹಾರಿಸಲಾಗಿತ್ತು. ಆದ್ದರಿಂದ ಈತನನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಹಿಂದೆ ಹಿಂದೂ ಹರ್ಷ ಕೊಲೆ ಆರೋಪಿಗಳ ವಿರುದ್ಧವೂ ಯುಎಪಿಎ ಅಡಿ ಕೇಸ್ ದಾಖಲಿಸಲಾಗಿತ್ತು. ಬಳಿಕ ಎನ್ಐಎ ಗೆ ಕೇಸ್ ಹಸ್ತಾಂತರ ಮಾಡಲಾಗಿದೆ.
ನಿನ್ನೆ (ಶುಕ್ರವಾರ) ಆರೋಪಿಗಳ ಮನೆ ಹಾಗೂ ಎಸ್ಡಿಪಿಐ ಕಚೇರಿ ಮೇಲೆ ಪೊಲೀಸರ ದಾಳಿ ಮಾಡಿದ್ದರು. ಈ ಕುರಿತು ಮಾಹಿತಿ ನೀಡಿರುವ ಶಿವಮೊಗ್ಗ ಎಸ್ಪಿ ಬಿ.ಎಂ.ಲಕ್ಷ್ಮೀಪ್ರಸಾದ್, ಸರ್ಚ್ ವಾರಂಟ್ ಪಡೆದು ಶೋಧ ಕಾರ್ಯ ನಡೆಸಿದ್ದೇವೆ. ಒಟ್ಟು ಆರು ತಂಡಗಳಿಂದ ಕಾರ್ಯಾಚರಣೆ ನಡೆದಿದೆ. ಶೋಧದ ಕೆಲವು ದಾಖಲೆ ಪತ್ತೆಯಾಗಿದ್ದು, ಸೀಜ್ ಮಾಡಲಾಗಿದೆ. ಆರೋಪಿಗಳಿಗೆ ಎಎಸ್ಪಿಐ ಲಿಂಕ್ ಇರುವ ಸಂದೇಹ ಇರುವ ಹಿನ್ನೆಲೆಯಲ್ಲಿ ಕಚೇರಿ ಮೇಲೂ ಶೋಧ ಮಾಡಿದ್ದೇವೆ. ಘಟನೆಯಲ್ಲಿ ನಾಲ್ಕು ಜನ ಮುಖ್ಯ ಆರೋಪಿಗಳ ನೇರ ಪಾತ್ರ ಇರುವುದು ತಿಳಿದುಬಂದಿದೆ. ಇನ್ನುಳಿದಂತೆ ನಾಲ್ವರ ಪರೋಕ್ಷ ಪಾತ್ರವಿದ್ದು, ಈ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದಿದ್ದರು. ಇದೀಗ ಎಲ್ಲರ ವಿರುದ್ಧ ಯುಎಪಿಎ ಅಡಿ ಕೇಸ್ ದಾಖಲು ಮಾಡಲಾಗಿದೆ.
ಹಾಗಿದ್ದರೆ ಏನಿದು ಯುಎಪಿಎ?
ಯುಎಪಿಎ ಕಾಯ್ದೆ ಎಂದರೆ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ತಿದ್ದುಪಡಿ ಕಾಯ್ದೆ ಎಂದು ಅರ್ಥ. ಸಂಶಯಾಸ್ಪದ ವ್ಯಕ್ತಿಗಳನ್ನು ಉಗ್ರರೆಂದು ಘೋಷಿಸಲು, ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಕಲ್ಪಿಸುವ ಕಾನೂನು ಇದಾಗಿದೆ. ಸಂಶಯಾಸ್ಪದ ವ್ಯಕ್ತಿಗಳನ್ನು ಭಯೋತ್ಪಾದಕರು ಎಂದು ಘೋಷಿಸಿದ ನಂತರ ಅವರ ಮೇಲೆ ಪ್ರಯಾಣ ನಿಷೇಧ ಹೇರಿಕೆ ಸೇರಿದಂತೆ ಹಲವು ಕ್ರಮ ಜೈಗೊಳ್ಳಲು ಈ ಕಾನೂನಿನಡಿ ಅವಕಾಶವಿದೆ.
ಲಷ್ಕರ್-ಎ-ತೋಯ್ಬಾ ಸಂಸ್ಥಾಪಕ ಹಫೀಜ್ ಸಯೀದ್ ಮತ್ತು ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಝರ್ ಈ ಕಾಯ್ದೆಯಡಿಯಲ್ಲಿ ಭಯೋತ್ಪಾದಕರೆಂದು ಘೋಷಿಸಲ್ಪಡಲಿದ್ದಾರೆ. (ದಿಗ್ವಿಜಯ ನ್ಯೂಸ್)