

ಯಾದಗಿರಿ: ಜೀವನಾಧಾರವಾಗಿರುವ ಕುರಿಗಳನ್ನು ಸಾಯಲು ಬಿಟ್ಟು ತಾನೊಬ್ಬನೇ ಪ್ರಾಣ ಉಳಿಸಿಕೊಳ್ಳಲು ಒಪ್ಪದ ಕುರಿಗಾಹಿಯ ಮನವೊಲಿಸಿ ಕೊನೆಗೂ ಆತನನ್ನು ನಡುಗಡಗಡೆಯಿಂದ ಸುರಕ್ಷಿತವಾಗಿ ಕರೆತಂದಿರುವ ಘಟನೆ ಯಾದಗಿರಿಯ ನಾರಾಯಣಪುರದ ಐಬಿ ತಾಂಡಾದಲ್ಲಿ ನಡೆದಿದೆ.
ಇಲ್ಲಿಯ ಕೃಷ್ಣಾ ನದಿಯಲ್ಲಿ ಕಳೆದ ಐದು ದಿನಗಳಿಂದ ಸಿಲುಕಿಕೊಂಡಿರುವ ಕುರಿಗಾಹಿ ಟೋಪಣ್ಣನ ಮನವೊಲಿಸಿ ಆತನ ಜತೆ ನಾಯಿಯನ್ನು ಸುರಕ್ಷಿತವಾಗಿ ಕರೆತರಲಾಗಿದೆ. ಆದರೆ ಕುರಿಗಳು ಮಾತ್ರ ನಡುಗಡ್ಡೆಯಲ್ಲಿಯೇ ಉಳಿದುಕೊಂಡಿವೆ.
ಕೃಷ್ಣಾ ನದಿಗೆ 1.80 ಲಕ್ಷ ಕ್ಯೂಸೆಕ್‌ನಷ್ಟು ಭಾರಿ ಪ್ರಮಾಣದ ನೀರು ಹರಿಬಿಟ್ಟಿದ್ದರಿಂದ ಹುಣಸಗಿ ತಾಲೂಕಿನ ನಾರಾಯಣಪುರದ ಶ್ರೀ ಛಾಯಾ ಭಗವತಿ ಬಳಿ ಎಡದನಮಾಳಿ ತಪ್ಪಲು ಪ್ರದೇಶದ ನಡುಗಡ್ಡೆಯಲ್ಲಿ 150ಕ್ಕೂ ಅಧಿಕ ಕುರಿಗಳೊಂದಿಗೆ ಟೋಪಣ್ಣ ಸಿಲುಕಿ ಹಾಕಿಕೊಂಡಿದ್ದ.
ಕಳೆದ ರವಿವಾರದಂದು ನದಿಗೆ ನೀರು ಹರಿ ಬಿಡುವದನ್ನು ಸ್ಥಗಿತಗೊಳಿಸಿದ್ದರಿಂದ ನದಿಯಲ್ಲಿ ನೀರು ಇಲ್ಲದೆ ಇರುವುದನ್ನು ಗಮನಿಸಿದ ಟೋಪಣ್ಣ ಹಾಗೂ ಢೀಕಪ್ಪ ಕುರಿಗಳ ಜತೆ ಹೋಗಿದ್ದರು. ಅಲ್ಲಿಯೇ ರಾತ್ರಿ ತಂಗಿದ್ದರು. ಆದರೆ ಗುರುವಾರ ಬಸವ ಸಾಗರದಿಂದ ನದಿಗೆ 1 ಲಕ್ಷ ಕ್ಯೂಸೆಕ್ ನಷ್ಟು ನೀರು ಬಿಡಲು ಆರಂಭಿಸಿ ಶುಕ್ರವಾರ 1.80 ಲಕ್ಷ ಕ್ಯೂಸೆಕ್ ಏರಿಕೆಯಾಗಿದ್ದರಿಂದ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಢೀಕಪ್ಪ ಈಜಿ ದಡ ಸೇರಿದರೆ ಕುರಿಗಳನ್ನು ಬಿಟ್ಟು ಮನಸಾಗದ ಟೋಪಣ್ಣ ಮಾತ್ರ ಅಲ್ಲಿಯೇ ಉಳಿದುಕೊಂಡು ಬಿಟ್ಟಿದ್ದ. ಐದು ದಿನಗಳಿಂದ ನೀರಿನ ಹರಿವು ಹೆಚ್ಚುತ್ತಲೇ ಹೋದರೂ ಆತ ಮಾತ್ರ ಅಲ್ಲಿಂದ ಕದಲಲಿಲ್ಲ. ಈಗ ಆತನ ಜೀವಕ್ಕೆ ಕುತ್ತಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ರಕ್ಷಣಾ ಸಿಬ್ಬಂದಿ ಮನವೊಲಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.
ಇದೀಗ ಯಾವುದೇ ಅಪಾಯವಿಲ್ಲದೆ ಕುರಿಗಾಯಿ ರಕ್ಷಣೆ ಮಾಡಲಾಗಿದ್ದು, 2 ಲಕ್ಷ ಕ್ಯೂಸೆಕ್ ನೀರಿನಲ್ಲಿ ರೋಚಕ ಕಾರ್ಯಾಚರಣೆ ಮೂಲಕ ಕುರಿಗಾಯಿ ಮತ್ತು ನಾಯಿಯನ್ನು ರಕ್ಷಣೆ ಮಾಡಲಾಗಿದೆ.