

ಬೆಂಗಳೂರು: ಹೊಸಕೋಟೆ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಅವರು ಇನ್ನು ಕೆಲವೇ ಕ್ಷಣಗಳಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಹ-ಸದಸ್ಯತ್ವ ಪಡೆಯಲಿದ್ದಾರೆ.
ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಬಚ್ಚೇಗೌಡ ಅವರ ಪುತ್ರ ಕಾಂಗ್ರೆಸ್ನ ಕೈ ಹಿಡಿಯಲು ಇನ್ನು ಕೆಲವೇ ನಿಮಿಷಗಳು ಬಾಕಿ ಇವೆ.
ಸಹ ಸದಸ್ಯತ್ವ ಪಡೆಯಲಿರುವ ಸಂಬಂಧ ಇದಾಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಸದಾಶಿವನಗರದ ನಿವಾಸದಲ್ಲಿ ಭೇಟಿ ಮಾಡಿ ಅವರು ಮಾತುಕತೆ ನಡೆಸಿರುವ ಶರತ್ ಬಚ್ಚೇಗೌಡ ಅವರು ಕೆಲವು ದಿನಗಳಿಂದ ನಡೆದಿರುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ನಮ್ಮ ಕಾರ್ಯಕರ್ತರು ಕೂಡ ಕಾಂಗ್ರೆಸ್ ಸೇರ್ಪಡೆಗೆ ಒಪ್ಪಿದ್ದಾರೆ. ಹೀಗಾಗಿ ನಾನು ಮೊದಲು ಕಾಂಗ್ರೆಸ್ ಶಾಸಕಾಂಗ ಪಕ್ಷ (ಸಿಎಲ್ಪಿ)ದ ಸಹ ಸದಸ್ಯತ್ವ ಪಡೆಯುತ್ತಿದ್ದೇನೆ. ಗುರುವಾರ ಬೆಳಗ್ಗೆ ಸಿಎಲ್ಪಿ ನಾಯಕ ಸಿದ್ದರಾಮಯ್ಯ ಅವರು ಸದಸ್ಯತ್ವ ನೀಡಲಿದ್ದಾರೆ. ಕಾಂಗ್ರೆಸ್ ಪಕ್ಷದ ನಿಲುವು ಮತ್ತು ನನ್ನ ನಿಲುವು ಒಂದೇ ಆಗಿರುವ ಹಿನ್ನೆಲೆಯಲ್ಲಿ ಸಿಎಲ್ಪಿ ಸದಸ್ಯತ್ವ ಪಡೆಯಲು ತೀರ್ಮಾನಿಸಿದ್ದೇನೆ. ನನ್ನ ಬೆಂಬಲಿಗರೂ ಅದಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದ್ದರು.
2018 ರಲ್ಲಿ ಬಿಜೆಪಿ ಅಭ್ಯರ್ಥಿ ಆಗಿದ್ದ ಶರತ್ ಬಚ್ಚೇಗೌಡ. ನಂತರ ಕಾಂಗ್ರೆಸ್ ಅಭ್ಯರ್ಥಿ ಎಂಟಿಬಿ ವಿರುದ್ಧ ಸೋಲು ಕಂಡಿದ್ದರು. ನಂತರ ಟಿಕೆಟ್ ಸಿಗಲಿಲ್ಲ ಎನ್ನುವ ಕಾರಣಕ್ಕೆ ಪಕ್ಷೇತರ ಅಭ್ಯರ್ಥಿ ಆಗಿ ಗೆದ್ದಿರುವ ಶರತ್ ಬಚ್ಚೇಗೌಡ ಈಗ ಕಾಂಗ್ರೆಸ್ಗೆ ಬೆಂಬಲ ಸೂಚಿಸಲು ಮುಂದಾಗಿದ್ದಾರೆ.
ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದು ರಾಜಕೀಯ ಪಕ್ಷ ಸೇರಲು ಸಾಧ್ಯವಿಲ್ಲ. ಆದ್ದರಿಂದ ಅವರು ಕಾಂಗ್ರೆಸ್ ಸಹ ಸದಸ್ಯರಾಗಿ ಕೆಲಸ ಮಾಡಲಿದ್ದಾರೆ ಎಂದು ಇದಾಗಲೇ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಂದ ಡಿ.ಕೆ.ಶಿವಕುಮಾರ್ ಅವರು ಶರತ್ ಬಚ್ಚೇಗೌಡ ಪಕ್ಷ ಸೇರ್ಪಡೆಗೆ ಅನುಮತಿ ಪಡೆದುಕೊಂಡಿದ್ದರು. ಆದರೆ, ನಿಯಮದ ಪ್ರಕಾರ ಶರತ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲು ಸಾಧ್ಯವಿಲ್ಲ. ಆದ್ದರಿಂದ ಅವರು ಕಾಂಗ್ರೆಸ್ನ ಶಾಸಕಾಂಗ ಪಕ್ಷದ ಸಹ ಸದಸ್ಯರಾಗಲಿದ್ದಾರೆ.
ಇದಾಗಲೇ ಈ ಕ್ಷಣಕ್ಕೆ ಸಾಕ್ಷಿಯಾಗಲು ಕಾಂಗ್ರೆಸ್ ಧುರೀಣರಾದ ಸಿದ್ದರಾಮಯ್ಯ,ಡಿಕೆ ಶಿವಕುಮಾರ್, ಜಮೀರ್ ಅಹಮದ್ ಖಾನ್, ಬೈರತಿ ಸುರೇಶ್,ರಮೇಶ್ ಕುಮಾರ್, ಕೆ.ಜೆ ಜಾರ್ಜ್,ಎಸ್ ಆರ್ ಪಾಟೀಲ್, ಕೃಷ್ಣಬೈರೇಗೌಡ, ನಜೀರ್ ಅಹಮದ್ ವೇದಿಕೆಗೆ ಹಾಜರು ಇದ್ದಾರೆ.