

ಬೆಂಗಳೂರು: ನಗರದ ನಗರತ್‌ಪೇಟೆಯಲ್ಲಿ ಚಿನ್ನ ಕಲಬೆರಕೆ ದಂಧೆ ಮೇಲೆ ದಾಳಿ ನಡೆಸಿ ಸಿಸಿಬಿ ಪೊಲೀಸರು ನಾಲ್ವರನ್ನು ಬಂಧಿಸಿ 1.7 ಕೆಜಿ ಕಲಬೆರಕೆ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.
ನಗರತ್‌ಪೇಟೆಯ ರಾಜೇಶ್ ಬೋಸ್ಲೆ, ಸಿದ್ಧು ಶಿಂಧೆ ಅಲಿಯಾಸ್ ವಿಜಯ್, ಅಕ್ಷಯ್ ಮತ್ತು ವೃತಿಕ್ ಬಂಧಿತರು. 1.794 ಕೆಜಿ ಚಿನ್ನ ಮತ್ತು 20 ಸಾವಿರ ರೂ. ಜಪ್ತಿ ಮಾಡಲಾಗಿದೆ. ನಗರತ್‌ಪೇಟೆ ಮುಖ್ಯರಸ್ತೆ ಮಾತಾಜಿ ಜ್ಯುವೆಲರಿ ಮಾರ್ಕೆಟ್‌ನಲ್ಲಿ ಕಲಬೆರಕೆ ಚಿನ್ನ ತಯಾರಿಸಿ ಪ್ರತಿದಿನ 3-5 ಕೆ.ಜಿ ಮಾರಾಟ ಮಾಡುತ್ತಿದ್ದರು ಎಂದು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ರಮಣ ಗುಪ್ತ ತಿಳಿಸಿದ್ದಾರೆ.
ಮಹಾರಾಷ್ಟ್ರ ಮೂಲದ ರಾಜೇಶ್ ಬೋಸ್ಲೆ, ಕುಟುಂಬದ ಜತೆ ಚಿಕ್ಕಪೇಟೆಯಲ್ಲಿ ನೆಲೆಸಿದ್ದಾನೆ. ಐದು ವರ್ಷಗಳಿಂದ ನಗರತ್‌ಪೇಟ್ತೆಯಲ್ಲಿ ಚಿನ್ನದ ಬಿಸ್ಕತ್ ಮಾರಾಟ ಮಳಿಗೆ ಇಟ್ಟಿದ್ದ. ದುಪ್ಪಟ್ಟು ಹಣ ಸಂಪಾದನೆಗೆ ಅಡ್ಡದಾರಿ ತುಳಿದಿದ್ದ. ಇದಕ್ಕೆ ಮೂವರು ಸಹಚರರು ಸಾಥ್ ಕೊಟ್ಟಿದ್ದರು.
ಚಿನ್ನದ ಗಟ್ಟಿಗಳನ್ನು ಆಸ್ಮಿಯಮ್ ಸ್ಪಾಂಜ್ ಎಂಬ ರಾಸಾಯನಿಕ ವಸ್ತುವನ್ನು ಬಳಸಿ ಕಲಬೆರಕೆ ಮಾಡಿ ಬಳಿಕ ಆರೋಪಿಗಳು, ನಂತರ ಚಿನ್ನವನ್ನು ಕರಗಿಸಿ ಬಿಸ್ಕೆತ್‌ಗಳನ್ನು ತಯಾರಿಸುತ್ತಿದ್ದರು. ಸ್ವಿಜರ್ಲೆಂಡ್, ದುಬೈ, ಗಲ್ಫ್ ದೇಶಗಳ ಪ್ರತಿಷ್ಠಿತ ಚಿನ್ನದ ಮಾರಾಟ ಕಂಪನಿಗಳ ನಕಲಿ ಸೀಲುಗಳನ್ನು ಬಳಸಿ ಕಲಬೆರಕೆ ಚಿನ್ನವನ್ನು ಪರಿಶುದ್ಧವೆಂದು ಮಾರಾಟ ಮಾಡುತ್ತಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಪಡೆದ ವಿಶೇಷ ವಿಚಾರಣಾ ದಳದ ಇನ್‌ಸ್ಪೆಕ್ಟರ್ ರವಿಪಾಟೀಲ್ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ. 6 ತಿಂಗಳಿಂದ ಈ ಕಲಬೆರಕೆ ಚಿನ್ನ ಮಾರಾಟದ ಬಗ್ಗೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಇನ್ನುಳಿದ ವ್ಯಾಪಾರಿಗಳ ಹಿನ್ನೆಲೆ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.