‘ಪ್ರಾಯ ಆಗೋಗಿದೆ, ವಯಸ್ಸಾದ್ರಿಂದ ಏನೇನೋ ಬಡಬಡಿಸ್ತಾರೆ- ಅಧಿಕಾರಕ್ಕೆ ಬರಬೇಕಂತೆ ಆಸೆ ಪಾಪ...’

sadananda
Published on

ಬೆಂಗಳೂರು: ಕೆಲವರು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂಬ ಹಗಲುಗನಸು ಕಾಣುತ್ತಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ವ್ಯಂಗ್ಯವಾಡಿದರು.

ಸಂಜಯನಗರದಲ್ಲಿ ಅಗತ್ಯವುಳ್ಖವರಿಗೆ ದಿನಸಿ ಪದಾರ್ಥಗಳ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಭಾನುವಾರ ಭಾಗವಹಿಸಿದ್ದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾಶ್ಮೀರದ 370ನೇ ವಿಧಿ ರದ್ದು ಮರು ಪರಿಶೀಲನೆ ಕುರಿತು ಕಾಂಗ್ರೆಸ್ ನ ಹಿರಿಯ ಧುರೀಣ ದಿಗ್ವಿಜಯ ಸಿಂಗ್ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಈಗಾಗಲೇ ಅನೇಕ ಚುನಾವಣೆಯಲ್ಲಿ ಅಸ್ತಿತ್ವ ಕಳೆದುಕೊಂಡಿದೆ. ಕೇರಳ, ತಮಿಳುನಾಡಿನಲ್ಲಿ ಅಧ್ಯಾಯ ಮುಗಿದಿದೆ. ಪಶ್ಚಿಮ ಬಂಗಾಳದಲ್ಲಿ ಆ ಪಕ್ಷಕ್ಕೆ ವಿಳಾಸವೇ ಇಲ್ಲದಂತಾಗಿದೆ. ಆದರೂ ಅಧಿಕಾರದ ಹಗಲುಗನಸು ಕಾಣುತ್ತಿದ್ದಾರೆ ಎಂದು ಕಾಲೆಳೆದರು.

ದಿಗ್ವಿಜಯ ಸಿಂಗ್ ಪ್ರಾಯ ಮುಗಿದು, ವಯಸ್ಸಾಗಿದೆ. ಹಾಗಾಗಿ ಏನೇನು ಬಡಬಡಿಸಲಾರಂಭಿಸಿದ್ದಾರೆ. ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಇಂತಹ ದೇಶ ವಿರೋಧಿ ಹೇಳಿಕೆಯನ್ನು ಸಹಿಸಲಾಗದು ಎಂದು ಸದಾನಂದ ಗೌಡ ಕಿಡಿಕಾರಿದರು.

ಕುಟುಕು: ಕರೊನಾ ನಿರೋಧಕ ಲಸಿಕೆ ಬಗ್ಗೆ ಅಪಪ್ರಚಾರ ಮಾಡುತ್ತಿದ್ದ ಸ್ನೇಹಿತರೆ ಇಂದು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ವ್ಯಾಕ್ಸಿನ್ ಪೂರೈಕೆಗೆ ಬೇಡಿಕೆಯಿಟ್ಟಿದ್ದಾರೆ ಎಂದು ಕುಟುಕಿದ ಅವರು, ಮುಂದಿನ ಮೂರು ತಿಂಗಳೊಳಗೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕುವುದು ಕೇಂದ್ರ ಸರ್ಕಾರದ ಗುರಿಯಾಗಿದೆ ಎಂದು ಸದಾನಂದ ಗೌಡ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net