

ಬೆಂಗಳೂರು: ಧಾರವಾಡದಲ್ಲಿ ಮೂರು ದಿನಗಳ ಕಾಲ ಆರ್ ಎಸ್ ಎಸ್ ರಾಷ್ಟ್ರೀಯ ಕಾರ್ಯಕಾರಿ ಬೈಠಕ್ ನಡೆದ ಒಂದು ವಾರದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆರ್ ಎಸ್ ಎಸ್ ಪ್ರಮುಖ ಮುಕುಂದ್ ಭಾನುವಾರ ಭೇಟಿಯಾಗಿದ್ದಾರೆ.
ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಿಎಂ ಅಧಿಕೃತ ನಿವಾಸ ರೇಸ್ ವ್ಯೂನಲ್ಲಿ ಈ ಸಮಾಗಮವಾಗಿದೆ. ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆದಿದ್ದು, ಪ್ರಸ್ತುತ ವಿದ್ಯಮಾನಗಳು, ಸರ್ಕಾರದ ನೀತಿ-ನಿರ್ಧಾರ ಸೇರಿದಂತೆ ಸಂಘಟನೆ ಹಾಗೂ ರಾಜಕೀಯ ಮಹತ್ವದ ವಿಚಾರಗಳು ಪ್ರಸ್ತಾಪವಾಗಿವೆ ಎಂದು ಮೂಲಗಳು ತಿಳಿಸಿವೆ.
ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಮುನ್ನ ಈ ಮಾತುಕತೆಯಾಗಿದೆ. ಹಾಗೆಯೇ ಸಚಿವ ಸಂಪುಟ ಸಭೆ ಸೋಮವಾರ ನಿಗದಿಯಾಗಿದ್ದು, ಈ ಭೇಟಿ ಹೆಚ್ಚು ಮಹತ್ವ ಪಡೆದುಕೊಂಡಿದೆ.
ಅಲ್ಲದೆ, ಮೂರು ದಿನಗಳ ಬೈಠಕ್ ಕಾಲಕ್ಕೆ ಆರ್ ಎಸ್ ಎಸ್ ವರಿಷ್ಠರೆಲ್ಲ ಧಾರವಾಡದಲ್ಲಿದ್ದರು. ಸಿಎಂ ಆದಿಯಾಗಿ ಯಾರೊಬ್ಬರ ಭೇಟಿಗೂ ಅವಕಾಶ ನೀಡಿದ್ದಿಲ್ಲ. ಯಶಸ್ವೀ ಬೈಠಕ್ ನಂತರ ಆರ್ ಎಸ್ ಎಸ್ ವರಿಷ್ಠರ ಸಂದೇಶವನ್ನು ಸಿಎಂ ಬೊಮ್ಮಾಯಿಗೆ ತಲುಪಿಸಲೆಂದು ಮುಕುಂದ್ ಭೇಟಿ ಮಾಡಿರುವ ಸಾಧ್ಯತೆಗಳಿವೆ ಎಂದು ತರ್ಕಿಸಲಾಗುತ್ತಿದೆ.