

ಬೆಂಗಳೂರು: ಲಾರಿಗಳ ಮುಖಾಂತರ ಸರಕು ಸೇವೆಗಳನ್ನು ಸಾಗಿಸುವ ರೋ ರೋ (ರೋಲ್ ಆನ್ ರೋಲ್) ರೈಲು ಸೇವೆಗೆ ಇಂದು ಚಾಲನೆ ದೊರೆತಿದೆ.
ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಇಂಥದ್ದೊಂದು ಯೋಜನೆ ರೂಪಿಸಲಾಗಿದೆ. ಬೆಂಗಳೂರು ಹೊರವಲಯದ ನೆಲಮಂಗಲ ರೈಲ್ವೆ ನಿಲ್ದಾಣದಲ್ಲಿ ಇಂದು ನೈಋತ್ಯ ರೈಲ್ವೆ ಯೋಜನೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಲೋಕಾರ್ಪಣೆ ಮಾಡಿದರು.
ಸಿಂಗಾರಗೊಂಡಿರುವ ರೈಲಿಗೆ ಹಸಿರು ನಿಶಾನೆ ತೋರುವ ಮೂಲಕ ರೈಲಿಗೆ ಯಡಿಯೂರಪ್ಪ ಗೃಹ ಕಚೇರಿ ಕೃಷ್ಣದಿಂದ ಚಾಲನೆ ನೀಡಿದರು.
ರೋ ರೋ ಸೇವೆ ದೇಶದ ಹಲವು ಕಡೆಗಳಲ್ಲಿ ಲಭ್ಯವಿದೆ. ಆದರೆ ಮೊದಲ ಬಾರಿಗೆ ನೈಋತ್ಯ ರೈಲ್ವೆಯಲ್ಲಿ (ಎಸ್‍ಡಬ್ಲ್ಯುಆರ್) ಇಂದಿನಿಂದ ಆರಂಭವಾಗಲಿದೆ. ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ತೆಲಂಗಾಣಗಳ ಕೃಷಿ ಬಳಕೆ ಕೇಂದ್ರಗಳ ನಡುವೆ ಈ ರೈಲು ಸಂಪರ್ಕ ಸಾಧಿಸುತ್ತದೆ.
ಲಾರಿಗಳಲ್ಲಿ ಲೋಡ್ ಮಾಡಿ ರೈಲುಗಳಲ್ಲಿ ಹೊತ್ತೊಯ್ದು ನಿಗದಿತ ನಿಲ್ದಾಣಗಳಲ್ಲಿ ಲಾರಿಗಳನ್ನು ರೈಲಿನಿಂದ ಕೆಳಗಿಳಿಸಿ ನೇರವಾಗಿ ಸರಕುಗಳನ್ನು ಮಾಲಿಕರ ಸ್ಥಳಗಳಿಗೆ ತಲುಪಿಸುವುದೆ ಈ ರೋ-ರೋ ರೈಲಿನ ಕೆಲಸ. 17 ಗಂಟೆಯಿಂದ 20 ಗಂಟೆಯೊಳಗೆ ರೈಲು ತನ್ನ ನಿಗದಿತ ನಿಲ್ದಾಣ ತಲುಪಲಿದೆ. ಒಮ್ಮೆಲೆ 52 ಲಾರಿವರೆಗೆ ಈ ರೈಲಿನಲ್ಲಿ ಸಾಗಿಸಬಹುದಾಗಿದ್ದು, ಒಂದು ಲಾರಿಗೆ ಅಂದಾಜು 27 ಸಾವಿರ ರೂಪಾಯಿ ತಗುಲಲಿದೆ.
ಕೃಷಿ ಉಪಕರಣಗಳು, ರಾಸಾಯನಿಕ ಮತ್ತು ಕೈಗಾರಿಕಾ ವಸ್ತುಗಳನ್ನು ಒಳಗೊಂಡ ಒಟ್ಟು 1260 ಟನ್ ಗಳನ್ನು ಮೊದಲ ಓಟದಲ್ಲಿ ಲೋಡ್ ಗಳನ್ನು ಕೊಂಡೊಯ್ಯಲಿದೆ. ಇದು ನೆಲಮಂಗಲ ಮತ್ತು ಬೇಲ್ ನಡುವೆ 682 ಕಿ.ಮೀ ದೂರದಲ್ಲಿ ಚಲಿಸುತ್ತದೆ ಮತ್ತು ಮೂರು ರೈಲ್ವೆ ವಲಯಗಳನ್ನು ಒಳಗೊಂಡಿದೆ.
ಈ ಯೋಜನೆಯಿಂದ ಇಂಧನ ಕಡಿಮೆ ಬಳಕೆಯಾಗುತ್ತದೆ, ಪ್ರಯಾಣದ ಅವಧಿ ಕಡಿತಗೊಳ್ಳುತ್ತದೆ. ಸಮಯ, ರಸ್ತೆ ಅಪಘಾತ, ಚಾಲಕರಿಗೆ ಅನುಕೂಲ, ಇಂಧನದ ಸಮಸ್ಯೆ ಹಾಗೂ ಮುಖ್ಯವಾಗಿ ಕಳ್ಳತನವಾಗುವುದು ತಪ್ಪುತ್ತದೆ ಎಂದಿದ್ದಾರೆ ತಜ್ಞರು.