

ಕಾರವಾರ: ರಾಜ್ಯಾದ್ಯಂತ ಭುಗಿಲೆದ್ದಿರುವ ಹಿಜಾಬ್ ಗಲಾಟೆ ವಿವಾದದ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ. ಹಿಜಾಬ್ ಪರವಾಗಿ ಹಿಂದೂ ವಕೀಲ ದೇವದತ್ ಕಾಮತ್ ವಾದಿಸುತ್ತಿದ್ದು, ಇದು ಕೆಲವರ ಅಸಮಾಧಾನಕ್ಕೆ ಗುರಿಯಾಗಿದೆ. ಆದ್ದರಿಂದ ಜಾಲತಾಣಗಳಲ್ಲಿ ಕೂಡ ದೇವದತ್ ಅವರ ವಿರುದ್ಧ ಕೆಲವೊಂದು ಕಮೆಂಟ್‌ಗಳು ಬರುತ್ತಿವೆ.
ಆದರೆ ಇವರ ಪರವಾಗಿ ಇದೀಗ ದೇವದತ್ ಪರವಾಗಿ ನಿಂತಿದ್ದಾರೆ ಕಾರವಾರದ ಶ್ರೀರಾಮಕೃಷ್ಣ ಆಶ್ರಮದ ಶ್ರೀ ಭಾವೇಶಾನಂದ ಸ್ವಾಮೀಜಿ. ಅವರು ನೀಡಿರುವ ಬೆಂಬಲದ ಬಗ್ಗೆ ಖುದ್ದು ದೇವದತ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಷೇರ್ ಮಾಡಿಕೊಂಡಿದ್ದಾರೆ.
ಸ್ವಾಮೀಜಿ ಹೇಳಿದ್ದೇನು?
ಶಾಲೆಗಳಲ್ಲಿ ಹಿಜಾಬ್- ಕೇಸರಿ ಶಾಲು ಬೇಡ, ವಿದ್ಯಾರ್ಥಿಗಳು ಮನುಷ್ಯರು ಹಾಕುವ ಬಟ್ಟೆ ಧರಿಸಿಕೊಂಡು ಬಂದರೆ ಸಾಕು. ಶಾಲಾ- ಕಾಲೇಜುಗಳಲ್ಲಿ ಧರ್ಮವನ್ನು ತರದೆ ಉತ್ತಮ ವಸ್ತ್ರಕ್ಕೆ ಆದ್ಯತೆ ನೀಡಲಿ. ಆದರೆ ಹಿಜಾಬ್ ಪರವಾಗಿ ವಾದಿಸಿದ ಕೂಡಲೇ ದೇವದತ್ ಕಾಮತ್ ಅವರನ್ನು ಹಿಂದೂ ವಿರೋಧಿ ಅನ್ನೋದು ಸರಿಯಲ್ಲ. ವಕೀಲ ದೇವದತ್ ಕಾಮತ್ ಶ್ರೀ ರಾಮಕೃಷ್ಣ ಆಶ್ರಮದ ವಿದ್ಯಾರ್ಥಿಯಾಗಿದ್ದ ನೆಲೆಯಲ್ಲಿ ಬೆಂಬಲ ನೀಡಿದ್ದಾರೆ ಎಂದು ಸ್ವಾಮೀಜಿ ಹೇಳಿದ್ದಾರೆ.
ಹಿಜಾಬ್ ವಿವಾದವನ್ನು ರಾಜಕೀಯ ಪಕ್ಷಗಳು ದಾಳವಾಗಿ ಬಳಸಿಕೊಳ್ಳುತ್ತಿವೆ. ಸರ್ಕಾರ ನಿಗದಿಪಡಿಸಿದ ಸಮವಸ್ತ್ರವನ್ನು ವಿದ್ಯಾರ್ಥಿಗಳು ಧರಿಸಬೇಕು. ಒಂದು ವೇಳೆ ಸಮವಸ್ತ್ರ ಇಲ್ಲದಿದ್ದರೆ ವಿದ್ಯಾರ್ಥಿಗಳು ಅರ್ಧಂಬರ್ಧ ವಸ್ತ್ರ ಧರಿಸಬಾರದು. ಎಲ್ಲರೂ ಶಿಸ್ತು ಕಾಪಾಡಿಕೊಳ್ಳಬೇಕು. ಮುಸ್ಲಿಂ ಮಹಿಳೆಯರು ಕೂಡಾ ರಾಮಕೃಷ್ಣ ಆಶ್ರಮಕ್ಕೆ ಬಂದು ನಮಾಜ್ ಮಾಡಿದ್ದಾರೆ. ಕುರಾನ್ ಕೂಡಾ ಓದಿದ್ದಾರೆ. ನಾವು ಎಲ್ಲಾ ಧರ್ಮೀಯರು ಯಾವುದೇ ಬೇಧ-ಭಾವವಿಲ್ಲದೇ ಇರಬೇಕು. ಶಾಲಾ- ಕಾಲೇಜುಗಳಲ್ಲಿ ಪೂಜೆ, ಪುನಸ್ಕಾರ, ನಮಾಜ್ ಯಾವ ಧರ್ಮಾಚರಣೆಯೂ ಬೇಡ ಎಂದ ಸ್ವಾಮೀಜಿ ತಿಳಿಸಿದ್ದಾರೆ.
ತಮಗೆ ಬೆಂಬಲ ಸೂಚಿಸಿರುವುದಕ್ಕೆ ದೇವದತ್ ಅವರು ಸ್ವಾಮೀಜಿಗೆ ಧನ್ಯವಾದ ಸಲ್ಲಿಸಿದ್ದಾರೆ.