

ಬೆಂಗಳೂರು: ಸುಡು ಬಿಸಿಲಿನಿಂದ ರಾಜ್ಯಾದ್ಯಂತ ಜನರು ಸುಸ್ತಾಗಿ ಹೋಗಿದ್ದಾರೆ. ಕೆಲವು ಭಾಗಗಳಲ್ಲಂತೂ ಬಿಸಿಲು 40 ಡಿಗ್ರಿ ಸೆಲ್ಸಿಯಸ್ ಮೀರಿದೆ, ಕರಾವಳಿ, ಉತ್ತರ ಕರ್ನಾಟಕ ಭಾಗಗಳಲ್ಲಿ ಮಾತ್ರ ಇಷ್ಟು ವರ್ಷ ಕಾಣಿಸಿಕೊಳ್ಳುತ್ತಿದ್ದ ಬಿರುಬಿಸಿಲು ಈ ಬಾರಿ ಮಲೆನಾಡನ್ನೂ ಬಿಟ್ಟಿಲ್ಲ.
ಮಾರ್ಚ್ ಅಂತ್ಯ, ಏಪ್ರಿಲ್ ಆರಂಭದಲ್ಲಿಯೇ ಇಷ್ಟು ಉರಿಬಿಸಿಲಾದರೆ ಮುಂದೆ ಗತಿಯೇನು ಎಂದುಕೊಳ್ಳುತ್ತಿದ್ದಾರೆ ಹಲವರು. ಬಿಸಿಲಿನ ಈ ಕಾಲದಲ್ಲಿ ಮಳೆ ಸುರಿಯದಿರಲಿ ಎಂದು ಕೆಲವು ಕೃಷಿಕರು, ಬೆಳೆಗಾರರು ಹಾರೈಸುತ್ತಿದ್ದರೂ, ಇದಾವುದರ ಪರಿವೇ ಇಲ್ಲದ ಹಲವು ಮಂದಿ ಮಳೆಗಾಗಿ ಪ್ರಾರ್ಥಿಸುತ್ತಿದ್ದಾರೆ. ಇಂಥವರಿಗೆ ಹವಾಮಾನ ಇಲಾಖೆ ತಂಪಿನ ಸುದ್ದಿ ಕೊಟ್ಟಿದೆ.
ಇಂದಿನಿಂದ ಅಂದರೆ (ಏಪ್ರಿಲ್ 6ರಿಂದ) ವಿವಿಧ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಏಪ್ರಿಲ್ ರವರೆಗೆ ಭಾರಿ ಪ್ರಮಾಣದ ಮಳೆ ಬೇರೆ ಬೇರೆ ಊರುಗಳಲ್ಲಿ ಬೀಳುವ ನಿರೀಕ್ಷೆ ಇದೆ ಎಂದು ಹಮಾಮಾನ ಇಲಾಖೆ ಹೇಳಿದೆ.
ಇಲಾಖೆಯ ತಜ್ಞರು ಹೇಳಿರುವ ಪ್ರಕಾರ, ಏಪ್ರಿಲ್ 6ರಂದು ಮೈಸೂರು, ಹಾಸನ, ಕೊಡಗು, ಚಾಮರಾಜನಗರ, ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ, ಏಪ್ರಿಲ್ 7ರಂದು ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಹಾಸನ, ಮೈಸೂರು, ಕೊಡಗು ಭಾಗದಲ್ಲಿ ಮಳೆಯಾಗಲಿದೆ.
ಏಪ್ರಿಲ್ 8ರಂದು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಕೊಡಗು, ಹಾಸನದಲ್ಲಿ ಮಳೆ ಬೀಳುವ ನಿರೀಕ್ಷೆ ಇದ್ದು, ಏಪ್ರಿಲ್ 9 ಮತ್ತು 10ರಂದು ದ.ಕನ್ನಡ, ಉಡುಪಿ, ಉತ್ತರ ಕನ್ನಡ, ಧಾರವಾಡ, ಕಲಬುರಗಿ, ಬೆಳಗಾವಿ, ಶಿವಮೊಗ್ಗ, ಮೈಸೂರು, ಕೊಡಗು, ರಾಯಚೂರು, ಹಾಸನ, ಚಿಕ್ಕಮಗಳೂರು ವ್ಯಾಪ್ತಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪ್ರಕೃತಿ ಹವಾಮಾನ ಇಲಾಖೆಯ ತಜ್ಞರ ಅಧ್ಯಯನವವನ್ನೂ ಬುಡಮೇಲು ಮಾಡಿರುವ ಅನೇಕ ಘಟನೆಗಳು ಈ ಹಿಂದೆ ನಡೆದಿವೆ. ಆದರೆ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಮುಂಜಾಗರೂಕತೆ ವಹಿಸಿಕೊಳ್ಳುವುದು ಒಳಿತು.