

ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೆಸರು ಕೇಳಿಬರುತ್ತಿದ್ದಂತೆಯೇ ಬೆಳಗಾವಿಯ ರಮೇಶ್ ಜಾರಕಿಹೊಳಿ ಅವರ ಬೆಂಬಲಿಗರು ಕೊತಕೊತ ಕುದಿಯುತ್ತಿದ್ದಾರೆ.
ಉಪಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿಗೆ ಆಗಮಿಸಿದ್ದ ಶಿವಕುಮಾರ್ ಅವರ ವಿರುದ್ಧ ಭಾರಿ ಪ್ರತಿಭಟನೆ ಶುರುವಾಗಿದ್ದು, ಕೆಲ ಕಾಲ ವಾತಾವರಣ ಉದ್ವಿಗ್ನತೆಗೆ ತೆರಳಿ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಗಿ ಬಂತು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಡಿ. ಕೆ. ಶಿವಕುಮಾರ್‌ಗೆ ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರುತ್ತಿದ್ದಂತೆಯೇ, ಹೊರಗಡೆ ಕಾದು ಕುಳಿತಿದ್ದ ಜಾರಕಿಹೊಳಿ ಬೆಂಬಲಿಗರು ಶಿವಕುಮಾರ್ ವಿರುದ್ಧ ಘೋಷಣೆ ಕೂಡಲು ಸುರು ಮಾಡಿದರು. ಮಾತ್ರವಲ್ಲದೇ, ಅವರ ರಾಜೀನಾಮೆಗೆ ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಅವರ ಬೆಂಗಾವಲು ವಾಹನದ ಮೇಲೆ ಚಪ್ಪಲಿ ತೂರಲಾಯಿತು. ಕಲ್ಲು ಎಸೆಯಲಾಯಿತು. ಕಪ್ಪು ಬಾವುಟವನ್ನೂ ತೂರಲಾಯಿತು.
ಈ ಗಲಾಟೆಯಲ್ಲಿ ಶಿವಕುಮಾರ್ ಅವರ ಬೆಂಬಲಿಗರ ವಾಹನದ ಗಾಜು ಪುಡಿಯಾಗಿದೆ. ಪೊಲೀಸರು ಮಧ್ಯೆ ಪ್ರವೇಶಿಸುತ್ತಿದ್ದಂತೆಯೇ, ಪ್ರತಿಭಟನಾಕಾರರು ಓರ್ವ ಪೊಲೀಸ್ ಕಾನ್ಸ್‌ಟೇಬಲ್ ಅವರನ್ನು ಎಳೆದಾಡಿದರು. ಸಿವಕುಮಾರ್ ಅವರ ಎಸ್ಕಾರ್ಟ್ ಸಿಬ್ಬಂದಿಯ ಮೇಲೂ ಹಲ್ಲೆ ಮಾಡಿದರು. ಬೆಂಗಾವಲು ಕಾರಿಗೆ ಗುದ್ದಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಈ ನಡುವೆ ಜಾರಕಿಹೊಳೆ ಮತ್ತು ಪೊಲೀಸರ ನಡುವೆ ವಾಗ್ವಿವಾದ ನಡೆಯಿತು.
ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, ಈ ಗಲಾಟೆಗೆ ಜಾರಕಿಹೊಳಿ ಅವರೇ ನೇರ ಕಾರಣ ಎಂದು ಆರೋಪಿಸಿದೆ. ಸುರೇಶ್ ಅಂಗಡಿ ಅವರ ಅಕಾಲಿಕ ಮರಣದಿಂದ ತೆರವಾಗಿರುವ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ. ನಾಳೆ ಕಾಂಗ್ರೆಸ್ನಿಂದ ಸತೀಶ್ ಜಾರಕಿಹೊಳಿ ನಾಮಪತ್ರ ಸಲ್ಲಿಸಲಿದ್ದಾರೆ.