ಪ್ರವಾಸೋದ್ಯಮಕ್ಕೆ ಉತ್ತೇಜನ: ಬೆಂಗಳೂರಿನಲ್ಲಿ ಫೆ.23ರಿಂದ ಅಂತಾರಾಷ್ಟ್ರೀಯ ಎಕ್ಸ್ ಪೋ

tourism
Published on

ಬೆಂಗಳೂರು: ರಾಜ್ಯದ ಪ್ರವಾಸೋದ್ಯಮ ವಲಯಕ್ಕೆ ಜಾಗತಿಕ ಬಂಡವಾಳ ಆಕರ್ಷಣೆ ಹಾಗೂ ಹೂಡಿಕೆಗೆ ಉತ್ತೇಜಿಸಲೆಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಮುಂದಿನ ಫೆಬ್ರವರಿ 23 ರಿಂದ 25ರವರೆಗೆ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಎಕ್ಸ್ ಪೋ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಮಾಹಿತಿ ನೀಡಿದರು.

ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕರ್ನಾಟಕ ಪ್ರವಾಸೋದ್ಯಮ ಸಂಸ್ಥೆ ಸಹಯೋಗದಲ್ಲಿ ಈ ಸಮಾವೇಶ ಆಯೋಜಿಸಲಿದ್ದು, 5,000 ಕೋಟಿ ರೂ ಬಂಡವಾಳ ಹೂಡಿಕೆಯಾಗುವ ನಿರೀಕ್ಷೆಯಿದೆ ಎಂದರು.

ಏಕ ಗವಾಕ್ಷಿ ವ್ಯವಸ್ಥೆ

ಐತಿಹಾಸಿಕ ಹಾಗೂ ಪ್ರವಾಸೋದ್ಯಮ ತಾಣಗಳಲ್ಲಿ ಚಿತ್ರೀಕರಣದ ಪರವಾನಗಿ ಪಡೆಯಲು ಚಲನಚಿತ್ರೋದ್ಯಮ ಸಾಕಷ್ಟು ತೊಂದರೆ ಅನುಭವಿಸುತ್ತಿರುವುದು ಗಮನಕ್ಕಿದ್ದು, ಪರವಾನಗಿ ಕ್ರಮ ಸರಳೀಕರಿಸಿ ಏಕ ಗವಾಕ್ಷಿ‌ ವ್ಯವಸ್ಥೆ ಮಾಡಲು ನಿರ್ಧರಿಸಿದ್ದು, ಇದರಿಂದ ಕಾಲಮಿತಿಯೊಳಗೆ ಅನುಮತಿ ಪಡೆಯುವುದು ಸಲೀಸಾಗುತ್ತದೆ ಎಂದರು.

ತೀವ್ರ ಹಾನಿ

ಕರೊನಾ ಸೋಂಕು ಮಾರಿಯಿಂದ ಬಹುದೊಡ್ಡ ನಷ್ಟ, ತೀವ್ರ ಹಾನಿಗೀಡಾದ ವಲಯವೆಂದರೆ ಅದು ಪ್ರವಾಸೋದ್ಯಮ ಹಾಗೂ ನೇರವಾಗಿ ಅವಲಂಬಿತ ಆತಿಥ್ಯ ವಲಯಕ್ಕೆ ಕಳೆದ ಎರಡು ವರ್ಷಗಳಲ್ಲಿ 25,000 ಕೋಟಿ ರೂ ನಷ್ಟವಾಗಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ಅನೇಕ ಪ್ರೋತ್ಸಾಹಕ ಕ್ರಮಗಳನ್ನು ಕೈಗೊಂಡಿದೆ ಎಂದು ಆನಂದ್ ಸಿಂಗ್ ತಿಳಿಸಿದರು. ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾಪು‌ ಸಿದ್ಧಲಿಂಗ ಸ್ವಾಮಿ, ವನ್ಯವಿಹಾರಧಾಮ ಅಧ್ಯಕ್ಷ ಅಪ್ಪಣ್ಣ,‌ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ನಿರ್ದೇಶಕಿ ಸಿಂಧೂ ರೂಪೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net