ಪೊಲೀಸರಿಗೆ ಬೇಕಾಗಿದ್ದ ‘ಮೋಸ್ಟ್‌ ವಾಂಟೆಡ್‌’ ಸಿದ್ದು ಪಕ್ಕ! ತಲೆಮರೆಸಿಕೊಂಡವ ಪಾದಯಾತ್ರೆಯಲ್ಲಿ ಪ್ರತ್ಯಕ್ಷ...

accused
Published on

ಬೆಂಗಳೂರು: ಪೊಲೀಸರು ಬಹು ದಿನಗಳಿಂದ ಹುಡುಕುತ್ತಿದ್ದ ‘ಮೋಸ್ಟ್‌ ವಾಂಟೆಡ್‌’ ಆರೋಪಿಯೊಬ್ಬ ಮೇಕೇದಾಟು ಪಾದಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪಕ್ಕದಲ್ಲಿ ಪ್ರತ್ಯಕ್ಷನಾಗಿದ್ದಾನೆ!

ಗುಂಡ್ಲುಪೇಟೆ ತಾಲೂಕಿನ ಹೊಣಕನಪುರ ಗ್ರಾಮದ ಸಿದ್ದರಾಜು ತಲೆ ಮರೆಸಿಕೊಂಡಿದ್ದ. ಈತನ ಮೇಲೆ ಪೊಲೀಸರಿಗೆ ಹಲ್ಲೆ ಮಾಡಿರುವ ಆರೋಪವಿದೆ. ಮಾತ್ರವಲ್ಲದೇ ಹಲವಾರು ಕೇಸ್‌ಗಳು ಈತನ ಮೇಲಿವೆ. 5 ಪೊಲೀಸರ ಮೇಲೆ ಹಲ್ಲೆ ಮಾಡಿ ತಲೆಮರೆಸಿಕೊಂಡಿದ್ದ ಈತನಿಗಾಗಿ ಪೊಲೀಸರು ಬೇಟೆಯಾಡಿದ್ದರೂ ಎಲ್ಲಿಯೂ ಸಿಕ್ಕಿರಲಿಲ್ಲ.

ಇದೀಗ ಮೇಕೇದಾಟು ಪಾದಯಾತ್ರೆಯ ಫೋಟೋ ಒಂದರಲ್ಲಿ ಸಿದ್ದರಾಮಯ್ಯ ಪಕ್ಕದಲ್ಲಿ ಈತ ಕಂಡುಬಂದಿದ್ದಾನೆ. ಈತನ ವಿರುದ್ಧ ಜಾತಿನಿಂದನೆ ಪ್ರಕರಣಗಳೂ ದಾಖಲಾಗಿವೆ. ಇದಕ್ಕೆ ಸಂಬಂಧಿಸಿದಂತೆ ಈತನ ವಿರುದ್ಧ ಸಮನ್ಸ್ ಜಾರಿಯಾಗಿತ್ತು.

ಸಮನ್ಸ್ ಜಾರಿಯಾದ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲು ಬೇಗೂರು ಮಹಿಳಾ ಪಿಎಸ್‍ಐ, ಎಎಸ್‍ಐ ಮತ್ತು 3 ಕಾನ್‍ಸ್ಟೇಬಲ್‍ಗಳು ತೆರಳಿದ್ದರು. ಈ ವೇಳೆ ಆರೋಪಿ ಸೇರಿದಂತೆ 15 ಕ್ಕೂ ಹೆಚ್ಚು ಮಂದಿ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ.

ಈತನ ಬಗ್ಗೆ ತಿಳಿದುಕೊಂಡ ತಕ್ಷಣ ಸಿದ್ದರಾಮಯ್ಯನವರು ಬೈದು ಕಳುಹಿಸಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net