

ಬೆಂಗಳೂರು: ರಾಜ್ಯದಲ್ಲಿ ಶಬ್ದ ಮಾಲಿನ್ಯಕ್ಕೆ ಕಾರಣರಾಗುತ್ತಿರುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ಸರ್ಕಾರಕ್ಕೆ ಆದೇಶಿಸಿರುವ ಹೈಕೋರ್ಟ್, ಈ ಹಿಂದೆ ತಾವು ನೀಡಿರುವ ಆದೇಶದ ಪ್ರಕಾರ ತೆಗೆದುಕೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡುವಂತೆ ಸೂಚಿಸಿದೆ.
ದ್ವಿಚಕ್ರ ವಾಹನಗಳು, ನೈಟ್ ಕ್ಲಬ್ಗಳು, ಮಸೀದಿಗಳು ಸೇರಿದಂತೆ ಕೆಲವರು ಶಬ್ದ ಮಾಲಿನ್ಯ ಮಾಡುತ್ತಿರುವುದಾಗಿ ದೂರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಕೋರ್ಟ್ ಈ ನಿರ್ದೇಶನ ನೀಡಿದೆ.
ಇದೇ ವೇಳೆ ಬೆಂಗಳೂರಿನಲ್ಲಿನ ಮಸೀದಿಗಳು ಶಬ್ದ ಮಾಲಿನ್ಯ ಉಂಟು ಮಾಡುತ್ತಿರುವುದಾಗಿ ಕೂಡ ಅರ್ಜಿ ಸಲ್ಲಿಕೆಯಾಗಿದೆ. ಶಬ್ದ ಮಾಲಿನ್ಯ ನಿಯಂತ್ರಣ ಕಾಯ್ದೆಯನ್ನು ಸಮರ್ಥವಾಗಿ ಜಾರಿಗೊಳಿಸಲು ಕೋರಿ ಗಿರೀಶ್ ಭಾರದ್ವಾಜ್ ಎಂಬುವರು ಈ ಅರ್ಜಿ ಸಲ್ಲಿಸಿದ್ದಾರೆ.
ಈ ಹಿಂದೆ ಮಸೀದಿಗಳು ಹಾಗೂ ಇತರ ಶಬ್ದ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಕೋರ್ಟ್ ಸೂಚನೆಯಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲದ ಸರ್ಕಾರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ‘ಪರಿಸ್ಥಿತಿ ನೋಡಿದರೆ ಸರ್ಕಾರ ಯಾವುದೇ ಕ್ರಮ ಕೈಗೊಂಡಂತೆ ಕಾಣುತ್ತಿಲ್ಲ. ಮಸೀದಿಗಳು ಪ್ರಮಾಣ ಪತ್ರದಲ್ಲಿ ವಕ್ಫ್ ಬೋರ್ಡ್ ಸೂಚನೆಯಂತೆ ದ್ವನಿವರ್ಧಕ ಬಳಸುತ್ತಿದ್ದೇವೆ ಎಂದು ತಿಳಿಸಿವೆ. ಆದರೆ ವಕ್ಪ್ ಬೋರ್ಡ್‌ಗೆ ದ್ವನಿವರ್ಧಕ ಬಳಸಲು ಅನುಮತಿ ನೀಡುವ ಅಧಿಕಾರವಿಲ್ಲ. ಹೀಗಾಗಿ ಯಾವ ಕಾನೂನಿನ ಅಡಿ ಇಂತಹ ಸುತ್ತೋಲೆ ಹೊರಡಿಸಿದೆ ಎಂಬ ಬಗ್ಗೆ ವಕ್ಪ್ ಮಂಡಳಿ ಸ್ಪಷ್ಟನೆ ನೀಡಬೇಕು ಎಂದು ನಿರ್ದೇಶಿಸಿದರು.
ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳು-2000ರ ನಿಯಮಗಳ ಪ್ರಕಾರ ರಾತ್ರಿ 10 ರಿಂದ ಬೆಳಗ್ಗೆ 6ರವರೆಗೆ ದ್ವನಿವರ್ಧಕ ಬಳಸುವಂತಿಲ್ಲ. ಅದೇ ರೀತಿ ಸಾರ್ವಜನಿಕ ಹಬ್ಬಗಳ ಸಂದರ್ಭದಲ್ಲಿ ವಾರ್ಷಿಕ 15 ದಿನಗಳಷ್ಟೇ ದ್ವನಿವರ್ಧಕ ಬಳಕೆಗೆ ಅವಕಾಶವಿದೆ. ಆದರೆ, ರಾಜ್ಯದಲ್ಲಿ ನಿಯಮಗಳ ಪಾಲನೆ ಆಗುತ್ತಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು. ಜತೆಗೆ ಮಾರ್ಪಾಡಿತ ವಾಹನಳಿಂದಲೂ ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎಂದರು. ಅದಕ್ಕೆ ಕೋರ್ಟ್, ಇಂಥ ವಾಹನಗಳು ಹಾಗೂ ಮಸೀದಿಗಳ ವಿರುದ್ಧ ಏನು ಕ್ರಮ ತೆಗೆದುಕೊಂಡಿದ್ದೀರಿ, ಆ ಬಗ್ಗೆ ವರದಿ ನೀಡಿ ಎಂದು ಸರ್ಕಾರಕ್ಕೆ ಸೂಚಿಸಿದೆ.