

ದಾವಣಗೆರೆ: ದಾವಣಗೆರೆಯಲ್ಲಿ ತಡ ರಾತ್ರಿ ಹೋಟೆಲ್ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಮಧ್ಯರಾತ್ರಿ 2 ಗಂಟೆಯವರೆಗೂ ಅಕ್ರಮವಾಗಿ ಯುವಕ ಯುವತಿಯರು ಸೇರಿ ಪಾರ್ಟಿ ಮಾಡಿದ್ದಾರೆ.
ದಾವಣಗೆರೆಯ ಪಕ್ಕದ ಮಿಟ್ಲಕಟ್ಟೆ ಗ್ರಾಮದಲ್ಲಿರುವ 'ದಿ ಸ್ಟೇಜ್' ಹೋಟೆಲ್ನಲ್ಲಿ ಈ ಘಟನೆ ನಡೆದಿದೆ. ಯುವಕ-ಯುವತಿಯರು ಸೇರಿ ರಾತ್ರಿ 2 ಗಂಟೆಯವರೆಗೂ ಡಿಜೆ ಸಾಂಗ್ಗಳಿಗೆ ಕುಣಿಯುತ್ತಿದ್ದರು. ಈ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಪೊಲೀಸರ ದಾಳಿಯಾಗುತ್ತಿದ್ದಂತೆಯೇ ನಶೆಯಲ್ಲಿದ್ದ ಯುವಕ-ಯುವತಿಯರು ಮುಖ ಮುಚ್ಚಿಕೊಂಡು ಅಲ್ಲಿಂದ ಹೊರ ನಡೆದಿದ್ದಾರೆ. ಯುವತಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಕಂಡುಬಂದಿದೆ. ಪಾರ್ಟಿಯಲ್ಲಿ ಮಾದಕವಸ್ತು ಬಳಕೆಯಾಗಿರುವ ಬಗ್ಗೆ ಶಂಕೆಯೂ ವ್ಯಕ್ತವಾಗಿದೆ.
ಪ್ರತಿ ವೀಕೆಂಡ್ಗಳಲ್ಲಿ ಅಕ್ರಮವಾಗಿ ಇಲ್ಲಿ ಪಾರ್ಟಿ ಆಯೋಜನೆ ಮಾಡಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ದಾವಣಗೆರೆಯ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೋಟೆಲ್ನವರೇ ಈ ಪಾರ್ಟಿ ಆಯೋಜನೆ ಮಾಡುತ್ತಿದ್ದು, ಕೇವಲ ಜೋಡಿಗಳಿಗೆ ಮಾತ್ರ ಪಾರ್ಟಿಗೆ ಪ್ರವೇಶ ನೀಡಲಾಗುತ್ತಿತ್ತು ಎಂಬ ವಿಷಯವೂ ತಿಳಿದು ಬಂದಿದೆ. (ದಿಗ್ವಿಜಯ ನ್ಯೂಸ್)