

ಬೆಂಗಳೂರು: ಕೋವಿಡ್ ಭೀಕರತೆಯ ನಡುವೆಯೇ ಒಮಿಕ್ರಾನ್ ಆಂತಕವೂ ಕಾಡುತ್ತಿದೆ. ಈ ಮಧ್ಯೆ ಲಾಕ್‌ಡೌನ್, ನೈಟ್ ಕರ್ಫ್ಯೂ, ಕಠಿಣ ಕ್ರಮ ಇತ್ಯಾದಿಗಳ ಮಾತು ಕೇಳಿಬರುತ್ತಿದೆ. ಇದಕ್ಕೆಲ್ಲಾ ಉತ್ತರಿಸಿದ್ದಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು.
ಇಂದು ನಡೆದ ಸಚಿವ ಸಂಪುಟದ ಬಳಿಕ ಮಾತನಾಡಿದ ಅವರು, ಒಮಿಕ್ರಾನ್ ಬಗ್ಗೆ ಸದ್ಯ ಯಾರೂ ಆತಂಕಗೊಳ್ಳುವ ಅವಶ್ಯಕತೆ ಇಲ್ಲ. ಮುಂಜಾಗರೂಕತೆಯ ಕ್ರಮಗಳನ್ನು ತೆಗೆದುಕೊಳ್ಳಬೇಕಷ್ಟೇ. ಸದ್ಯಕ್ಕೆ ನೈಟ್ ಕರ್ಫ್ಯೂ ಆಗಲೀ ಕಠಿಣ ಕ್ರಮಗಳ ಜಾರಿಯಾಗಲೀ ಮಾಡುವುದಿಲ್ಲ. ಇನ್ನೊಂದು ವಾರ ಪರಿಶೀಲಿಸುತ್ತೇವೆ. ನಂತರ ಪರಿಸ್ಥಿತಿಯನ್ನು ನೋಡಿಕೊಂಡು ಈ ಬಗ್ಗೆ ಯೋಚನೆ ಮಾಡಲಾಗುವುದು ಎಂದರು.
ನರ್ಸಿಂಗ್ ವಿದ್ಯಾರ್ಥಿಗಳಿಗೆ ಇದಾಗಲೇ ಎರಡು ಡೋಸ್ ಕಡ್ಡಾಯ ಮಾಡಿದ್ದೇವೆ. ಶೀಘ್ರದಲ್ಲಿಯೇ ಕ್ರಿಸ್‌ಮಸ್, ಹೊಸ ವರ್ಷ ಕಾಲಿಡುತ್ತಿದೆ. ಈ ಬಗ್ಗೆ ಸದ್ಯ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಒಂದು ವಾರ ನೋಡಿಕೊಂಡು ಕೆಲ ನಿರ್ಬಂಧಗಳನ್ನು ವಿಧಿಸಲಾಗುವುದು. ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಮುಖ್ಯಸ್ಥ ಡಾ.ಸುದರ್ಶನ್ ಅವರ ಜೊತೆ ಚರ್ಚೆ ಮಾಡಿದ್ದೇವೆ. ಯಾರೂ ಗಾಬರಿಗೊಳ್ಳುವ ಅವಶ್ಯಕತೆ ಇಲ್ಲ ಎಂದರು.
ಇನ್ನು ಹಾಸ್ಟೆಲ್ಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದೇವೆ. ಒಂದೇ ಬಾರಿ ಎಲ್ಲಾ ವಿದ್ಯಾರ್ಥಿಗಳು ಊಟಕ್ಕೆ ಹೋಗದಂತೆ ಸೂಚನೆ ನೀಡಲಾಗಿದೆ. ವಾರ್ಡನ್, ಅಡುಗೆಯವರಿಗೆ ಎರಡು ಡೋಸ್ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಹೇಳಲಾಗಿದೆ. ಕೇರಳ ವಿದ್ಯಾರ್ಥಿಗಳಿಗೆ ನಿರ್ಬಂಧ ಮುಂದುವರಿಯಲಿದೆ. ಆರ್‌ಟಿಪಿಸಿಆರ್ ಟೆಸ್ಟ್ ಸೇರಿ ಇತರ ನಿರ್ಬಂಧಗಳು ಮುಂದುವರಿಯುತ್ತವೆ. ಉಳಿದಂತೆ ಯಾವುದೇ ಹೊಸ ಗೈಡ್‌ಲೈನ್ಸ್ ಇಲ್ಲ ಎಂದರು.