

ಮೈಸೂರು: ಪುನೀತ್ ರಾಜ್‌ಕುಮಾರ್ ನಿಧನರಾಗಿ ಒಂದು ತಿಂಗಳಾಗಿದೆ. ಇವರ ಸಾವಿನಿಂದ ಆಘಾತಗೊಂಡು ಕೆಲ ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಇನ್ನು ಕೆಲವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೈಸೂರಿನ ಯುವಕನೊಬ್ಬ ಪುನೀತ್ ಅವರ ನೆನಪಿನಲ್ಲಿಯೇ ಹುಚ್ಚನಂತಾಗಿದ್ದು, ಮನೆಬಿಟ್ಟು ಹೋದವ ವಾಪಸಾಗಲೇ ಇಲ್ಲ. ಆತನ ಪಾಲಕರ ಆಕ್ರಂದನ ಮುಗಿಲುಬಿಟ್ಟಿದೆ.
ಮೈಸೂರಿನ ಟಿ. ನರಸೀಪುರದ ಖ್ಯಾತಮಾರನಹಳ್ಳಿಯ ದರ್ಶನ್ ಎಂಬ 23 ವರ್ಷದ ಎಂ.ಕಾಂ ಓದುತ್ತಿರುವ ಯುವಕ ಕಳೆದ 20 ದಿನಗಳಿಂದ ನಾಪತ್ತೆಯಾಗಿದ್ದು, ಆತನಿಗಾಗಿ ಪಾಲಕರು ಹುಡುಕದ ಜಾಗವಿಲ್ಲ.
ಶಿವರಾಮ್ ಹಾಗೂ ಕುಮಾರಿ ದಂಪತಿ ಪುತ್ರನಾಗಿರುವ ದರ್ಶನ್, ಪುನೀತ್ ಅವರ ಅಪ್ಪಟ ಅಭಿಮಾನಿಯಾಗಿದ್ದ. ಅವರ ಪ್ರತಿಯೊಂದು ಚಿತ್ರದ ಫೋಟೋ ಸಂಗ್ರಹಿಸುವುದರಿಂದ ಹಿಡಿದು, ಅವರನ್ನೇ ಅನುಸರಿಸುತ್ತಿದ್ದ. ಅವರು ಮೃತಪಟ್ಟ ಸುದ್ದಿ ತಿಳಿದ ದಿನದಿಂದ ಮಂಕಾಗಿ ಹೋಗಿದ್ದ ದರ್ಶನ್, ಮನೆಯಲ್ಲಿ ವಿಚಿತ್ರವಾಗಿ ವರ್ತಿಸಲು ಶುರು ಮಾಡಿದ್ದ. ನ.9ರಂದು ನಡೆದ ಪುನೀತ್ ಅವರ ಪುಣ್ಯಸ್ಮರಣೆಗೆ ಹೋಗಿಬರುತ್ತೇನೆಂದು ಹೇಳಿದವ ಇನ್ನೂ ಮನೆಗೆ ಬರಲಿಲ್ಲ.
‘ನಾವು ಕೂಲಿ ಮಾಡಿಕೊಂಡು ಬದುಕುತ್ತಿದ್ದೇವೆ. ನನ್ನ ಮಗನನ್ನು ಕಷ್ಟಪಟ್ಟು ಓದಿಸುತ್ತಿದ್ದೆ. ಪುನೀತ್ ಅವರ ನಿಧನರಾದ ಸುದ್ದಿ ತಿಳಿದಾಗ ಹುಚ್ಚನಂತೆ ವರ್ತಿಸುತ್ತಿದ್ದ. ಅವರ ಅಂತ್ಯಕ್ರಿಯೆಗೆ ಕರೆದುಕೊಂಡು ಹೋಗುವಂತೆ ಹೇಳಿದ್ದ. ಆದರೆ ನಮಗೆ ಬೆಂಗಳೂರಿಗೆ ಹೋಗುವುದು ಸಾಧ್ಯವಾಗಿರಲಿಲ್ಲ. ದಿನವೂ ಮಗನಿಗೆ ಸಮಾಧಾನ ಮಾಡುತ್ತಿದ್ದೆ. ನನಗೆ ಗೊತ್ತಿಲ್ಲದಂತೆಯೇ ಒಂದು ದಿನ ಹೋಗಿ ದೊಡ್ಡದಾಗಿ ಪುನೀತ್ ಅವರ ಹಚ್ಚೆ ಹಾಕಿಸಿಕೊಂಡು ಬಂದಿದ್ದ. ನಂತರ ಗೋಡೆ ಗುದ್ದುವುದು, ಪುನೀತ್ ಅವರ ಚಿತ್ರವನ್ನೇ ನೋಡುತ್ತಾ ಕಣ್ಣೀರು ಹಾಕುತ್ತಿದ್ದ’ ಎಂದು ತಾಯಿ ಕುಮಾರಿ ಹೇಳುತ್ತಾರೆ.
ಪುಣ್ಯಸ್ಮರಣೆಗೆ ಹೋಗುತ್ತೇನೆ ಎಂದ. ನಮ್ಮಂಥವರಿಗೆ ಅಲ್ಲಿ ಹೋಗಲು ಆಗುವುದಿಲ್ಲ ಎಂದು ಹೇಳಿದಾಗ ಅದೇ ದಿನ ಕಾಲೇಜಿಗೆ ಹೋಗಿ ಬರುತ್ತೇನೆ ಎಂದವ ವಾಪಸ್ ಬರಲಿಲ್ಲ. ಪುನೀತ್ ಸರ್... ನೀವೀಗ ದೇವರಾಗಿದ್ದೀರಿ... ನನ್ನ ಮಗನನ್ನು ಎಲ್ಲಿದ್ದರೂ ಹುಡುಕಿ ನನ್ನ ಮಡಿಲಿಗೆ ಸೇರಿಸಿ ಸರ್... ಎಂದು ಕುಮಾರಿ ಅವರು ಕಣ್ಣೀರು ಸುರಿಸುತ್ತಿದ್ದಾರೆ.
ಮಗ ಹೋದಂದಿನಿಂದ ಅಮ್ಮ ಊಟ, ನಿದ್ದೆ ಬಿಟ್ಟಿದ್ದಾರೆ. ದಿನವೂ ನಿದ್ದೆ ಮಾತ್ರೆ ಕೊಟ್ಟು ಮಲಗಿಸುತ್ತಾ ಇದ್ದೇನೆ ಎನ್ನುತ್ತಾರೆ ದರ್ಶನ ಸಹೋದರ.